Tuesday, June 2, 2020

ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷ್ಯತನದಿಂದ ಕಳಪೆ ಕಾಮಗಾರಿ

ಗುಣಮಟ್ಟದ ಕಾಮಗಾರಿ ನಡೆಸಲು ಸ್ಥಳೀಯರಿಂದ ಆಗ್ರಹ 

ಭದ್ರಾವತಿ ನಗರದ ಜೆಪಿಎಸ್ ಕಾಲೋನಿ ಮೆಸ್ಕಾಂ ಕಛೇರಿ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಸರ್.ಎಂ ವಿಶ್ವೇಶ್ವರಯ್ಯ ಉದ್ಯಾನವನದ ಪಕ್ಕದಲ್ಲಿ ನಿರ್ಮಿಸಲಾಗಿರುವ ಬಾಕ್ಸ್ ಟೈಪ್ ಚರಂಡಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವುದು. 
ಭದ್ರಾವತಿ, ಜೂ. ೨: ನಗರದ ಜೆಪಿಎಸ್ ಕಾಲೋನಿ ಮೆಸ್ಕಾಂ ಕಛೇರಿ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಸರ್.ಎಂ ವಿಶ್ವೇಶ್ವರಯ್ಯ ಉದ್ಯಾನವನದ ಪಕ್ಕದಲ್ಲಿ ನಿರ್ಮಿಸಲಾಗಿರುವ ಬಾಕ್ಸ್ ಟೈಪ್ ಚರಂಡಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ನಿಂತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. 
ಕಳೆದ ೨-೩ ತಿಂಗಳಿನಿಂದ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯತನದಿಂದ ಕಾಮಗಾರಿ ಗುಣಮಟ್ಟ ಕಳೆದುಕೊಂಡಿದೆ. ಚರಂಡಿಯ ಕಾಂಕ್ರೀಟ್ ಈಗಾಗಲೇ ಕಿತ್ತು ಹೋಗುವ ಸ್ಥಿತಿಯಲ್ಲಿದ್ದು, ಅಲ್ಲದೆ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ನೀರು ಸರಾಗವಾಗಿ ಹರಿದು ಹೋಗದೆ ನಿಂತುಕೊಳ್ಳುತ್ತಿದೆ. ರಸ್ತೆಯ ಮಧ್ಯಭಾಗದಲ್ಲಿ ಹಾಕಲಾಗಿರುವ ಕಾಂಕ್ರೀಟ್ ಕುಸಿದು ಬೀಳುವ ಸ್ಥಿತಿಯಲ್ಲಿದೆ.
 ಈ ರಸ್ತೆಯಲ್ಲಿ ಪ್ರತಿದಿನ ನೂರಾರು ಮಂದಿ ಸಂಚರಿಸುತ್ತಾರೆ. ಕಾಗದನಗರ ಮತ್ತು ಜೆಪಿಎಸ್ ಕಾಲೋನಿಗೆ ಸಂರ್ಪಕ ಕಲ್ಪಿಸುವ ರಸ್ತೆ ಇದಾಗಿದೆ. ಅಲ್ಲದೆ ಈ ರಸ್ತೆಯಲ್ಲಿ ಸರ್ಕಾರಿ ಶಾಲೆ ಹಾಗೂ ದೇವಸ್ಥಾನವಿದ್ದು, ತಕ್ಷಣ ಕಾಮಗಾರಿಯಲ್ಲಿನ ಲೋಪದೋಷ ಸರಿಪಡಿಸಿಕೊಂಡು ಗುಣಮಟ್ಟದ ಕಾಮಗಾರಿ ನಡೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. 

No comments:

Post a Comment