Tuesday, June 2, 2020

ನ್ಯಾಯಾಲಯದಲ್ಲಿ ಕಲಾಪಗಳು ಆರಂಭ : ದಿನಕ್ಕೆ ೨೦ ಪ್ರಕರಣ ವಿಚಾರಣೆ

ಭದ್ರಾವತಿ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ವಾಹನಗಳನ್ನು ನಿಷೇಧಿಸಿರುವ ಹಿನ್ನಲೆಯಲ್ಲಿ ತಾಲೂಕು ಕಛೇರಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿರುವುದು.
ಭದ್ರಾವತಿ, ಜೂ. ೨: ನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸೋಮವಾರದಿಂದ ಕಲಾಪಗಳು ನಡೆಯುತ್ತಿದ್ದು, ದಿನಕ್ಕೆ ೨೦ ಪ್ರಕರಣಗಳ ವಿಚಾರಣೆ ಮಾತ್ರ ನಡೆಯುತ್ತಿದೆ. 
ಸರ್ವೋಚ್ಛ ನ್ಯಾಯಾಲಯದ ಮಾರ್ಗಸೂಚಿಯಂತೆ ಕಲಾಪಗಳು ನಡೆಯುತ್ತಿದ್ದು, ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೨ ಗಂಟೆವರೆಗೆ ಹಾಗೂ ೨.೪೫ ರಿಂದ ಸಂಜೆ ೫ ಗಂಟೆವರೆಗೆ ಕಲಾಪಗಳು ನಡೆಯುತ್ತಿವೆ. ಕೇವಲ ನ್ಯಾಯಾಧೀಶರು, ನ್ಯಾಯವಾದಿಗಳು ಹಾಗೂ ಸಿಬ್ಬಂದಿಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ.  ಬೆಳಿಗ್ಗೆ ೧೦ ಪ್ರಕರಣಗಳು ಹಾಗೂ ಮಧ್ಯಾಹ್ನ ೧೦ ಪ್ರಕರಣಗಳು ಒಟ್ಟು ದಿನಕ್ಕೆ ೨೦ ಪ್ರಕರಣಗಳ ವಿಚಾರಣೆ ಮಾತ್ರ ನಡೆಸಲಾಗುತ್ತಿದೆ. ಉಳಿದ ಪ್ರಕರಣಗಳ ವಿಚಾರಣೆಗಳನ್ನು ಮುಂದೂಡಲಾಗುತ್ತಿದೆ. 
ಸಾರ್ವಜನಿಕರ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದೆ. ಕಕ್ಷಿದಾರರು ಸಹ ನೇರವಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿಲ್ಲ. ಅಲ್ಲದೆ ನ್ಯಾಯಾಲಯದ ಆವರಣದಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಇದರಿಂದಾಗಿ ತಾಲೂಕು ಕಛೇರಿ ರಸ್ತೆಯಲ್ಲಿ ವಾಹನ ದಟ್ಟಣೆ ಅಧಿಕವಾಗಿದ್ದು, ರಸ್ತೆಯ ಎರಡು ಬದಿ ವಾಹನಗಳ ನಿಲುಗಡೆ ಕಂಡು ಬರುತ್ತಿದೆ. ತಾಲೂಕು ಕಛೇರಿ ರಸ್ತೆ ಕಾಮಗಾರಿ ಕಳೆದ ಸುಮಾರು ೫-೬ ತಿಂಗಳಿನಿಂದ ನಡೆಯುತ್ತಿದ್ದು, ಇದರಿಂದಾಗಿ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ. ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. 

No comments:

Post a Comment