ಭದ್ರಾವತಿ ತಾಲೂಕು ಪಂಚಾಯಿತಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಸದಸ್ಯರು ಕಾರ್ಯನಿರ್ವಹಣಾಧಿಕಾರಿಗಳ ವಿರುದ್ಧ ಹಲವು ಆರೋಪಗಳನ್ನು ಮಾಡುವ ಮೂಲಕ ಕರ್ತವ್ಯದಿಂದ ಬಿಡುಗಡೆಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಸಭೆಯಲ್ಲಿ ಕೇಳಿ ಬಂದ ಪ್ರಮುಖ ಆರೋಪಗಳು :- ಕಾನೂನು ಉಲ್ಲಂಘಿಸಿ ಗ್ರಾ.ಪಂ. ಪಿಡಿಓ ವರ್ಗಾವಣೆ
- ಯಾವುದೇ ಆದೇಶವಿಲ್ಲದೆ ಚಾಲಕನ ನೇಮಕ
- ನಿರ್ಲಕ್ಷ್ಯತನದಿಂದ ಅಂಗವಿಕಲ, ಎಸ್.ಸಿ/ಎಸ್.ಟಿ ಅನುದಾನ ಹಿಂದಕ್ಕೆ
ಭದ್ರಾವತಿ, ಜೂ. ೩: ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ವಿರುದ್ಧ ಸದಸ್ಯರು ಬುಧವಾರ ಹಲವು ಆರೋಪಗಳನ್ನು ಮಾಡುವುದರೊಂದಿಗೆ ಕರ್ತವ್ಯದಿಂದ ಬಿಡುಗಡೆಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಬೆಳಿಗ್ಗೆ ೧೧.೩೦ಕ್ಕೆ ಸಭೆ ಆರಂಭಗೊಳ್ಳುತ್ತಿದ್ದಂತೆ ಸದಸ್ಯರು ಮಾತನಾಡಿ, ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡರವರು ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ. ಸದಸ್ಯರ ಯಾವ ಮಾತಿಗೂ ಬೆಲೆ ಕೊಡುತ್ತಿಲ್ಲ. ಕರ್ತವ್ಯದಲ್ಲಿ ನಿರ್ಲಕ್ಷ್ಯತನ ತೋರಿಸುತ್ತಿದ್ದು, ಕಾನೂನಿನ ನಿಯಮಗಳನ್ನು ಉಲ್ಲಂಘಿಸಿ ಅಧಿಕಾರ ಚಲಾಯಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಆದೇಶದ ಪ್ರಕಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ವರ್ಗಾವಣೆ ಮಾಡುವ ಅಥವಾ ಅವರ ಸ್ಥಳಕ್ಕೆ ಮತ್ತೊಬ್ಬರನ್ನು ನೇಮಕಗೊಳಿಸುವ ಅಧಿಕಾರ ಕಾರ್ಯನಿರ್ವಹಣಾಧಿಕಾರಿಗಳು ಹೊಂದಿಲ್ಲ. ಆದರೂ ಸಹ ಅಭಿವೃದ್ಧಿ ಅಧಿಕಾರಿಯನ್ನು ವರ್ಗಾವಣೆಗೊಳಿಸಿ ಆ ಜಾಗಕ್ಕೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-೨ ನೇಮಕಗೊಳಿಸಿದ್ದಾರೆ. ಅಲ್ಲದೆ ತಾಲೂಕು ಪಂಚಾಯಿತಿಗೆ ಬಿಡುಗಡೆಯಾಗುವ ವಿವಿಧ ಅನುದಾನಗಳಲ್ಲಿ ಪರಿಶಿಷ್ಟ ಜಾತಿ, ಪಂಗಡಗಳಿಗೆ, ಅಂಗವಿಕಲರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಮೀಸಲಿಡಬೇಕಾದ ಅನುದಾನ ಕಾರ್ಯನಿರ್ವಹಣಾಧಿಕಾರಿಗಳ ನಿರ್ಲಕ್ಷ್ಯತನದಿಂದ ಸರ್ಕಾರಕ್ಕೆ ಹಿಂದಿರುಗಿದೆ. ತಾಲೂಕು ಪಂಚಾಯಿತಿಯಲ್ಲಿ ಖಾಲಿ ಇರುವ ಚಾಲಕರ ಹುದ್ದೆಗೆ ಯಾವುದೇ ಟೆಂಡರ್ ಕರೆಯದೆ ಹಾಗೂ ಸರ್ಕಾರದ ಆದೇಶವಿಲ್ಲದೆ ಸುಮಾರು ೧ ಒಂದು ವಾರದಿಂದ ಅಪರಿಚಿತ ವ್ಯಕ್ತಿಯನ್ನು ಅಕ್ರಮವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಇದು ಕ್ರಿಮಿನಲ್ ಅಪರಾಧವಾಗಿದ್ದು, ಈ ರೀತಿ ಹಲವು ಅಕ್ರಮಗಳು ನಿಮ್ಮಿಂದ ನಡೆದಿವೆ ಎಂದು ಆರೋಪಿಸಿದ ಸದಸ್ಯರು ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದರು.
ಸುಮಾರು ಮಧ್ಯಾಹ್ನ ೧ ಗಂಟೆವರೆಗೂ ಸದಸ್ಯರು ನಡೆದಿರುವ ಒಂದೊಂದೇ ಅಕ್ರಮಗಳನ್ನು ಸಭೆಯಲ್ಲಿ ಬಿಡಿ ಬಿಡಿಯಾಗಿ ವಿವರಿಸಿದರು. ಕಾರ್ಯನಿರ್ವಹಣಾಧಿಕಾರಿಗಳು ತಪ್ಪನ್ನು ಸರಿಪಡಿಸಿಕೊಳ್ಳುವುದಾಗಿ ತಿಳಿಸಿದರೂ ಸದಸ್ಯರು ಒಪ್ಪದ ಸದಸ್ಯರು ತಕ್ಷಣ ಕರ್ತವ್ಯದಿಂದ ಬಿಡುಗಡೆಗೊಳ್ಳುವಂತೆ ಆಗ್ರಹಿಸಿ ಧಿಕ್ಕಾರಗಳನ್ನು ಕೂಗಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಭಾಂಗಣದಲ್ಲಿಯೇ ಕೆಲ ಹೊತ್ತು ಪ್ರತಿಭಟನೆ ನಡೆಸಿದರು. ನಂತರ ಕಛೇರಿಗೆ ಬಂದ್ ಮಾಡಿ ಪ್ರತಿಭಟನೆ ತೀವ್ರಗೊಳಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ದೂರವಾಣಿ ಮೂಲಕ ಸದಸ್ಯರೊಂದಿಗೆ ಮಾತನಾಡಿ, ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದರು.
ತಾಲೂಕು ಕಾರ್ಯನಿರ್ವಹಣಾಧಿಕಾರಿ ಆಶಾ ಶ್ರೀಧರ್, ಉಪಾಧ್ಯಕ್ಷೆ ಸರೋಜಯಮ್ಮ ಹಾಜ್ಯನಾಯ್ಕ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಸ್. ರಮೇಶ್, ಸದಸ್ಯರಾದ ಧರ್ಮೇಗೌಡ, ಕೆ. ಮಂಜುನಾಥ್, ರುದ್ರಪ್ಪ, ತಿಪ್ಪೇಶ್‌ರಾವ್, ಎಂ.ಜಿ ದಿನೇಶ್, ಅಣ್ಣಾ ಮಲೈ, ಡಿ. ಲಕ್ಷ್ಮಿದೇವಿ, ನೇತ್ರಾಬಾಯಿ, ತುಂಗಮ್ಮ, ಸಿ. ಮಂಜುಳ, ಗೀತಾ ಜಗದೀಶ್, ಎಂ. ನಾಗರಾಜ, ಉಷಾಕಿರಣ, ಶಮಾಬಾನು, ಪ್ರೇಮ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment