ಭದ್ರಾವತಿ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಎಚ್.ಐ.ವಿ /ಏಡ್ಸ್ ನಿಯಂತ್ರಣ ಕುರಿತು ಮನೆ-ಮನೆ ಸಮೀಕ್ಷೆ ಮಾಹಿತಿ ಅಭಿಯಾನಕ್ಕೆ ಜಿಪಂ ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್ ಮಾಹಿತಿ ಕರಪತ್ರ ವನ್ನು ಆಶಾಕಾರ್ಯಕರ್ತಯರಿಗೆ ನೀಡುವ ಮೂಲಕ ಚಾಲನೆ ನೀಡಿದರು.
ಭದ್ರಾವತಿ: ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಆರೋಗ್ಯ ಇಲಾಖೆ ಕರ್ತವ್ಯವಾಗಿದ್ದು, ಈ ಹಿನ್ನಲೆಯಲ್ಲಿ ಇಲಾಖೆಯ ವೈದ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಹಾಗು ಆಶಾ ಕಾರ್ಯಕರ್ತೆಯರು ಹೆಚ್ಚಿನ ಗಮನ ಹರಿಸಬೇಕೆಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ಕರೆ ನೀಡಿದರು.
ಅವರು ಬುಧವಾರ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಎಚ್‌ಐವಿ/ಏಡ್ಸ್ ನಿಯಂತ್ರಣ ಕುರಿತು ಮನೆ-ಮನೆ ಸಮೀಕ್ಷೆ ಮಾಹಿತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಈ ಕಾರ್ಯಕ್ರಮಗಳು ಯಶಸ್ವಿಯಾಗಬೇಕು. ಮನುಷ್ಯನಿಗೆ ಹಣಕ್ಕಿಂತ ಆರೋಗ್ಯ ಮುಖ್ಯ. ಈ ನಿಟ್ಟಿನಲ್ಲಿ ಎಲ್ಲರೂ ಆರೋಗ್ಯದ ಕಡೆಗೆ ಗಮನಹರಿಸಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಮಾತನಾಡಿ, ತಾಲೂಕಿನಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ಬೇರೆ ತಾಲೂಕಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿದ್ದು, ಇದನ್ನು ನಿಯಂತ್ರಿಸುವ ಉದ್ದೇಶದಿಂದ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ಇಲಾಖೆ ಸಿಬ್ಬಂದಿಗಳು ಹಾಗು ಆಶಾ ಕಾರ್ಯಕರ್ತೆಯರು ಮಾ. ೧೨ ರಿಂದ ೧೫ರವರೆಗೆ ಮನೆ ಮನೆಗೆ ಭೇಟಿ ನೀಡಿ ಎಚ್‌ಐವಿ ಸೋಂಕಿನ ಕುರಿತು ಜಾಗೃತಿ ಮೂಡಿಸಬೇಕೆಂದರು.
ಎಚ್‌ಐವಿ ಸೋಂಕು ಕಂಡು ಬಂದಲ್ಲಿ ಯಾರು ಭಯಪಡುವ ಅಗತ್ಯವಿಲ್ಲ. ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಂತೆ ಇದು ಕೂಡ ಗುಣಪಡಿಸಬಹುದಾದ ಕಾಯಿಲೆಯಾಗಿದೆ. ಪ್ರಸ್ತುತ ಇದಕ್ಕೆ ಸೂಕ್ತ ಚಿಕಿತ್ಸೆ ಲಭ್ಯವಿದೆ. ಅಲ್ಲದೆ ಈ ಕಾಯಿಲೆಗೆ ಒಳಗಾದವರಿಗೆ ಸರ್ಕಾರ ಹಲವಾರು ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಓ.ಮಲ್ಲಪ್ಪ, ಡಾ. ಅಚ್ಯುತ್, ಮಂಗಳ, ಸಾವಿತ್ರಿ ಸೇರಿದಂತೆ ಇನ್ನಿತರರಿದ್ದರು.
No comments:
Post a Comment