ಭದ್ರಾವತಿ ಜನ್ನಾಪುರ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ದಶಮಾನೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ಜನಪದ ಜಾತ್ರೆ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
ಭದ್ರಾವತಿ: ಹಿಂದೆ ಕಲಾವಿದರಿಗೆ ರಾಜಮಹಾರಾಜರು ನೀಡುತ್ತಿದ್ದ ಗೌರವ, ಪ್ರೋತ್ಸಾಹ ಇಂದು ಕಂಡು ಬರುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಇಂದಿನ ಸರ್ಕಾರಗಳು ಈ ಬಗ್ಗೆ ಗಮನ ಹರಿಸಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಆಗ್ರಹಿಸಿದರು.
ಜನ್ನಾಪುರ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ದಶಮಾನೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ಜನಪದ ಜಾತ್ರೆ ಉದ್ಘಾಟಿಸಿ ಮಾತನಾಡಿದರು.
ರಾಜರ ಆಳ್ವಿಕೆಯಲ್ಲಿ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದ ಮಾದರಿಯಲ್ಲಿಯೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಕಲಾವಿದರನ್ನು ಪ್ರೋತ್ಸಾಹಿಸಬೇಕು. ರಾಜರ ಕಾಲದಲ್ಲಿ ಇನಾಂ ನೀಡುತ್ತಿದ್ದಂತೆಯೇ ಇಂದು ಕಲಾವಿದರಿಗೆ ಆರ್ಥಿಕ ಸಹಕಾರ ನೀಡಿ ಪ್ರೋತ್ಸಾಹಿಸುವುದು ಅಗತ್ಯವಾಗಿದೆ ಎಂದರು.
ಜಾನಪದ ಪುರಾತನ ಕಲೆಯಾಗಿದ್ದು, ಇದನ್ನು ಉಳಿಸಿ ಬೆಳೆಸುವ ಪ್ರಯತ್ನಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಮಕ್ಕಳನ್ನು ದುಶ್ಚಟಗಳಿಂದ ದೂರಮಾಡಲು ಕಲೆಗಳನ್ನು ಕಲಿಸುವುದು ಮುಖ್ಯ. ವಿದ್ಯಾಭ್ಯಾಸದ ಜೊತೆಗೆ ಕಲೆಗಳು ಸಹ ಮುಖ್ಯ ಎಂಬುದನ್ನು ಪೋಷಕರು ಅರಿತುಕೊಳ್ಳಬೇಕು. ಮಕ್ಕಳಿಗೂ ಅರಿವು ಮೂಡಿಸಬೇಕೆಂದು ಕರೆ ನೀಡಿದರು.
ಜಾನಪದ ಕಲಾವಿದ ಯುಗಧರ್ಮ ರಾಮಣ್ಣ ಮಾತನಾಡಿ, ಜಾನಪದರು ವಿದ್ಯಾವಂತರಲ್ಲ, ಆದರೆ ಬದುಕಿನ ಮಹತ್ವ ಅರಿತವರು. ಆರೋಗ್ಯದ ಮಹತ್ವ ತಿಳಿದವರು. ೬೪ವಿದ್ಯೆಗಳಿಗೂ ತಾಯಿ ಬೇರು ಭಾರತ. ಜ್ಞಾನಪೀಠ ಪಡೆದ ಎಲ್ಲ ಸಾಹಿತಿಗಳು ಹಳ್ಳಿಯ ಮಹತ್ವ ಅರಿತಿದ್ದರು. ಆದ್ದರಿಂದ ಅವರಿಗೆ ಬದುಕು-ಬವಣೆಗಳ ಮಹತ್ವ ತಿಳಿದಿತ್ತು ಎಂದರು.
ವೇದಿಕೆಯಲ್ಲಿ ಸಮಾಜ ಸೇವಕ ಪಿ. ವೆಂಕಟರಮಣ ಶೇಟ್, ಬೆಂಗಳೂರು ಬ್ಯಾಟರಾಯನಪುರ ಪೊಲೀಸ್ ಠಾಣಾಧಿಕಾರಿ ಸಿ. ಯೋಗೀಶ್ ಕುಮಾರ್, ರಂಗಕರ್ಮಿ ಸಾಸ್ವೇಹಳ್ಳಿ ಸತೀಶ್, ಚಲನಚಿತ್ರ ನಿರ್ದೇಶಕ ಹರ್ಷಪ್ರಿಯ, ನಗರಸಭೆ ಸದಸ್ಯ ಬಿ.ಎಂ ಮಂಜುನಾಥ್, ಮುಖಂಡರಾದ ಬಿ.ಕೆ ಜಗನ್ನಾಥ್, ಬಿ.ಎಸ್ ಗಣೇಶ್, ಉಮೇಶ್, ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾಸಂಘದ ಕಾರ್ಯದರ್ಶಿ ಜಗದೀಶ್, ದಿವಾಕರ್ ಸೇರಿದಂತೆ ಮತ್ತಿತರರಿದ್ದರು.
ಸಿಂಧು ಪ್ರಾರ್ಥಿಸಿ, ಜಗದೀಶ್ ಸ್ವಾಗತಿಸಿದರು. ಸೌಮ್ಯ ನಿರೂಪಿಸಿ, ವಂದಿಸಿದರು. ಇದಕ್ಕೂ ಮೊದಲು ಜನ್ನಾಪುರ ಶ್ರೀ ಮಹಾಗಣಪತಿ ದೇವಸ್ಥಾನದ ಮುಂಭಾಗದಿಂದ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದವರೆಗೂ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
No comments:
Post a Comment