ಭದ್ರಾವತಿ, ಸೆ. ೮ : ಹಿಂದೂ ಮಹಾಸಭಾ ಗಣಪತಿ ವಿಸರ್ಜನಾಪೂರ್ವ ಮೆರವಣಿಗೆಗೆ ಹೊಸಮನೆ ಮುಖ್ಯರಸ್ತೆ ತಮಿಳು ಶಾಲೆ ಬಳಿ ಮಧ್ಯಾಹ್ನ ೧೨ರ ಸಮಯದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಡೊಳ್ಳು ಕುಣಿತ, ವೀರಗಾಸೆ ಗೊಂಬೆ ನೃತ್ಯ, ಕೋಲಾಟ, ಕಂಸಾಳೆ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಆರಂಭಗೊಂಡ ಉತ್ಸವ ಮೆರವಣಿಗೆ ಮಧ್ಯಾಹ್ನ ೩ರ ವೇಳೆಗೆ ರಂಗಪ್ಪ ವೃತ್ತ ತಲುಪಿತು. ಮೆರವಣಿಯುದ್ದಕ್ಕೂ ಭಕ್ತರಿಂದ, ಸೇವಾಕರ್ತರಿಂದ ಮಜ್ಜಿಗೆ, ಪಾನಕ, ಕೋಸಂಬರಿ, ಮೈಸೂರ್ ಪಾಕ್, ಲಾಡು ವಿತರಣೆ ಜೊತೆಗೆ ಅನ್ನ ಸಂತರ್ಪಣೆಗಳು ಸಹ ಜರುಗಿದವು.
ಇದೆ ಸಂದರ್ಭದಲ್ಲಿ ಸಂಸದ ಬಿ ವೈ ರಾಘವೇಂದ್ರ ರಂಗಪ್ಪ ವೃತ್ತದಲ್ಲಿ ವಿನಾಯಕ ಸೇವಾ ಸಮಿತಿ ವತಿಯಿಂದ ರಂಗಪ್ಪ ವೃತ್ತದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ದ್ವಾರಬಾಗಿಲು ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
ನಗರಸಭೆ ಪ್ರಭಾರ ಅಧ್ಯಕ್ಷ ಚೆನ್ನಪ್ಪ, ಸ್ಥಾಯಿ ಸಮಿತಿಯ ಅಧ್ಯಕ್ಷ ಕೆ ಸುದೀಪ್ ಕುಮಾರ್, ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಕದಿರೇಶ್ ಸೇರಿದಂತೆ ನಗರಸಭಾ ಸದಸ್ಯರು, ವಿನಾಯಕ ಸೇವಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರದ್ದರು.
ಕುಣಿದು ಸಂಭ್ರಮಿಸಿದ ಭಕ್ತರು, ಕಾರ್ಯಕರ್ತರು:
ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ವಯಸ್ಸಿನ ಅಂತರವಿಲ್ಲದೆ ವಯೋವೃದ್ಧರು, ಮಹಿಳೆಯರು, ಯುವಕರು, ಯುವತಿಯರು, ಮಕ್ಕಳು ಕಲಾತಂಡಗಳೊಂದಿಗೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು. ಮತ್ತೊಂದೆಡೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಹಿಂದೂಪರ ಘೋಷಣೆಗಳೊಂದಿಗೆ ಕೇಸರಿ ಧ್ವಜ ಹಿಡಿದು ಕುಣಿದು ಸಂಭ್ರಮಿಸಿದರು.
ಮೆರವಣಿಗೆಯಲ್ಲಿ ವಿಧಾನಪರಿಷತ್ ಡಿ.ಎಸ್ ಅರುಣ್, ಬಿಜೆಪಿ ಪಕ್ಷದ ಪ್ರಮುಖರಾದ ಎಸ್. ದತ್ತಾತ್ರಿ, ಚನ್ನಬಸಪ್ಪ, ಎಸ್. ಕುಮಾರ್, ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಜೆಡಿಎಸ್ ಘಟಕದ ಜಿಲ್ಲಾಧ್ಯಕ್ಷ ಮಧು ಕುಮಾರ್ ಹಾಗೂ ನಗರಸಭಾ ಸದಸ್ಯರು ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ನಗರದ ವಿವಿಧೆಡೆಗಳಿಂದ ಸಾವಿರಾರು ಮಂದಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಕೇಸರಿ ಧ್ವಜ ಹಿಡಿದು ಸಂಭ್ರಮಿಸಿದರು.
No comments:
Post a Comment