Monday, February 27, 2023

ಬಿಎಸ್‌ವೈ-ಬಿವೈಆರ್ ನೀಚಮಟ್ಟದ ರಾಜಕಾರಣ : ಶಾರದ ಅಪ್ಪಾಜಿ

ಭದ್ರಾವತಿಯಲ್ಲಿ ಗುತ್ತಿಗೆ ಕಾರ್ಮಿಕರ ಪರ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ ಹಾಗು ಬೆಂಬಲಿಗರನ್ನು ಪೊಲೀಸರು ವಶಕ್ಕೆ ಕಾಗದನಗರದ ಚಂದ್ರಾಲಯಕ್ಕೆ ಕರೆ ತಂದಿರುವುದು.
    ಭದ್ರಾವತಿ, ಫೆ. ೨೭ : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರರವರು ಇಷ್ಟೊಂದು ನೀಚಮಟ್ಟಕ್ಕೆ ರಾಜಕಾರಣ ನಡೆಸುತ್ತಾರೆ ಎಂಬುದು ನನಗೆ ತಿಳಿದಿರಲಿಲ್ಲ. ಗುತ್ತಿಗೆ ಕಾರ್ಮಿಕರು ಮನವಿ ಕೊಡಲು ಸಹ ಅವಕಾಶ ನೀಡದೆ ನಮ್ಮನ್ನು ಕಳ್ಳರಂತೆ ವಶಕ್ಕೆ ಪಡೆದು ಕರೆತರುವ ಮೂಲಕ ದೌರ್ಜನ್ಯ ನಡೆಸಿದ್ದಾರೆಂದು ಜೆಡಿಎಸ್ ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ ಆಕ್ರೋಶ ವ್ಯಕ್ತಪಡಿಸಿದರು.
    ಅವರು ಕಾಗದನಗರ ಚಂದ್ರಾಲಯದಲ್ಲಿ ಮಾತನಾಡಿ, ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟ ಕುರಿತು ಬಿ.ಎಸ್ ಯಡಿಯೂರಪ್ಪ ಮತ್ತು ಅವರ ಮಗ ರಾಘವೇಂದ್ರರವರು ಪ್ರಧಾನಿ ಮೋದಿಯವರ ಗಮನಕ್ಕೆ ತಂದಿದ್ದಾರೋ, ಇಲ್ಲವೋ ಗೊತ್ತಿಲ್ಲ. ಸುಮಾರು ೧೫೦೦ ಗುತ್ತಿಗೆ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಇಂದು  ೨-೩ ಕೋಟಿ ರು. ವೆಚ್ಚದಲ್ಲಿ ಅವರ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕನಿಷ್ಠ ೫೦೦ ಕೋ.ರು. ಬಂಡವಾಳ ವಿಐಎಸ್‌ಎಲ್ ಕಾರ್ಖಾನೆಗೆ ನೀಡಿದರೆ ಸಾಕು ಬಡ ಕಾರ್ಮಿಕರು ಬದುಕಿಕೊಳ್ಳುತ್ತಾರೆ ಎಂದರು.
    ಗುತ್ತಿಗೆ ಕಾರ್ಮಿಕರು ಮನವಿ ಕೊಡಲು ಸಹ ಅವಕಾಶ ನೀಡದಿರಲು ಕಾರಣ ಸ್ಪಷ್ಟಪಡಿಸಬೇಕು. ನಾವು ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಸದಾ ಬೆಂಬಲ ನೀಡುದ್ದೇವೆ. ಯಡಿಯೂರಪ್ಪ ಮತ್ತು ರಾಘವೇಂದ್ರರವರು ಅವರು ಮಾಡಿರುವ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾರೆ ಎಂದರು.
    ಪಕ್ಷದ ನಗರದ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ ಮಾತನಾಡಿ, ಪ್ರಧಾನಿಯವರಿಗೆ ಮನವಿ ಕೊಡುವುದು ನಮ್ಮ ಹಕ್ಕು ಇದನ್ನು ಕಿತ್ತುಕೊಳ್ಳುವ ಮೂಲಕ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಖಂಡನೀಯ. ಕೇಂದ್ರ ಮತ್ತು ರಾಜ್ಯದ ಡಬ್ಬಲ್ ಇಂಜಿನ್ ಸರ್ಕಾರ ಕಾರ್ಮಿಕರ ಹಿತಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
    ಪಕ್ಷದ ರಾಜ್ಯ ಕಾರ್ಯದರ್ಶಿ ಜೆ.ಪಿ ಯೋಗೇಶ್ ಮಾತನಾಡಿ, ಕೇಂದ್ರ ಹಾಗು ರಾಜ್ಯಸರ್ಕಾರಗಳು ಗುತ್ತಿಗೆ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ವಿಷಾದನೀಯ ಬೆಳವಣಿಗೆಯಾಗಿದೆ. ಕಾರ್ಖಾನೆ ಮುಚ್ಚುವುದರಿಂದ ಕೇವಲ ೧೫೦೦ ಮಂದಿ ಗುತ್ತಿಗೆ ಕಾರ್ಮಿಕರು ಮಾತ್ರವಲ್ಲ ಅವರ ಕುಟುಂಬ ವರ್ಗದವರು, ರೈತರು ಹಾಗು ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಅವಲಂಬಿತರು ಸಹ ಸಂಕಷ್ಟಕ್ಕೆ ಒಳಗಾಗುವಂತಾಗಿದೆ ಎಂದರು.
    ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ನಗರಸಭಾ ಸದಸ್ಯರಾದ ಬಸವರಾಜ ಬಿ ಆನೇಕೊಪ್ಪ, ಉದಯ್‌ಕುಮಾರ್, ಮೈಲಾರಪ್ಪ, ಮಧುಸೂದನ್, ಸುರೇಶ್, ವೆಂಕಟೇಶ್ ಉಜ್ಜನಿಪುರ, ಭಾಗ್ಯಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment