Monday, July 13, 2020

ಬಾಕ್ಸ್ ಮಾದರಿ ಚರಂಡಿ ಕಾಮಗಾರಿ ಕಳಪೆ : ಗುಣಮಟ್ಟದ ಕಾಮಗಾರಿಗೆ ಆಗ್ರಹ


ಭದ್ರಾವತಿ ನಗರಸಭೆ ವಾರ್ಡ್ ನಂ.೬ರ ಶ್ರೀ ಬಸವೇಶ್ವರ ಸಭಾ ಭವನದ ಬಳಿ ನಡೆಯುತ್ತಿರುವ ಬಾಕ್ಸ್ ಮಾದರಿ ಚರಂಡಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವುದು. 
ಭದ್ರಾವತಿ, ಜು. ೧೩: ನಗರಸಭೆ ವಾರ್ಡ್ ೬ರ ವ್ಯಾಪ್ತಿಯ ಶ್ರೀ ಬಸವೇಶ್ವರ ಸಭಾ ಭವನದ ಬಳಿ ಕಳೆದ ಸುಮಾರು ೧ ತಿಂಗಳಿನಿಂದ ಬಾಕ್ಸ್ ಮಾದರಿ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆದಾರರ ನಿರ್ಲಕ್ಷ್ಯತನಿಂದ ಕಳಪೆ ಕಾಮಗಾರಿ ನಡೆಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 
ಬಾಕ್ಸ್ ಮಾದರಿ ಚರಂಡಿ ಕಾಮಗಾರಿಯಲ್ಲಿ ಕಾಂಕ್ರೀಟ್‌ಗೆ ಅಳವಡಿಸಲಾಗಿರುವ ಕಬ್ಬಿಣದ ಸರಳುಗಳನ್ನು ಹೊರ ತೆಗೆಯಲಾಗಿದೆ. ತಳಮಟ್ಟದಲ್ಲಿ ಯಾವುದೇ ಭದ್ರತೆ ಇಲ್ಲದಂತೆ ಕಾಮಗಾರಿ ನಿರ್ವಹಿಸಲಾಗಿದೆ. ಎರಡು ಬದಿಯ ಕಾಂಕ್ರೀಟ್ ಯಾವುದೇ ಆಧಾರವಿಲ್ಲದೆ ಕೆಳಗೆ ಕುಸಿದು ಬೀಳಲಿದೆ ಎಂದು ಸ್ಥಳೀಯರು ಆರೋಪಿಸಿದರು. 


ಭದ್ರಾವತಿ ನಗರಸಭೆ ವಾರ್ಡ್ ನಂ.೬ರ ಶ್ರೀ ಬಸವೇಶ್ವರ ಸಭಾ ಭವನದ ಬಳಿ ನಡೆಯುತ್ತಿರುವ ಬಾಕ್ಸ್ ಮಾದರಿ ಚರಂಡಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವ ಹಿನ್ನಲೆಯಲ್ಲಿ ಸ್ಥಳೀಯರು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 
     ಇದೀಗ ಕೈಗೊಳ್ಳುತ್ತಿರುವ ಕಾಮಗಾರಿಯನ್ನು ನೋಡಿದರೆ ಈ ಹಿಂದೆ ಕೈಗೊಳ್ಳಲಾಗಿದ್ದ ಕಾಮಗಾರಿಯೇ ಬಹಳಷ್ಟು ಉತ್ತಮವಾಗಿತ್ತು. ಸಂಬಂಧಪಟ್ಟ ಇಲಾಖೆಯವರು ತಕ್ಷಣ ಪ್ರಸ್ತುತ ನಡೆದಿರುವ ಕಾಮಗಾರಿಯನ್ನು ನೆಲಸಮಗೊಳಿಸಿ ಹೊಸದಾಗಿ ಕಾಮಗಾರಿ ಕೈಗೊಳ್ಳಬೇಕೆಂದು ಆಗ್ರಹಿಸಿದರು. 
ಕೆಲವು ದಿನಗಳ ಹಿಂದೆ ಈ ಸಂಬಂಧ ಸ್ಥಳೀಯರು ಪ್ರತಿಭಟನೆ ನಡೆಸಿ ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಲು ಆಗ್ರಹಿಸಿದ್ದರು. ಆದರೆ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದ್ದು, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. 

No comments:

Post a Comment