ಭದ್ರಾವತಿ: ವಾರ್ಡ್ ನಂ. ೨೯ರ ನಗರಸಭೆ ಮಾಜಿ ಸದಸ್ಯರೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿರುವುದಾಗಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರಸಭೆ ಮಾಜಿ ಸದಸ್ಯ ೪೬ ವರ್ಷದ ಅನಿಲ್ ಕುಮಾರ್ ಹೊಸ ಸಿದ್ದಾಪುರ ಗ್ರಾಮದವರಾಗಿದ್ದು, ಅವರ ಮನೆಯ ಪಕ್ಕದ ನಿವಾಸಿಯಾಗಿರುವ ಆನಿ ಯಾನೆ ಅನಿಲ್ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಹಲ್ಲೆ ನಡೆಯುವ ಹಿಂದಿನ ದಿನ ರಾತ್ರಿ ಅನಿ ಮದ್ಯಪಾನ ಮಾಡಿಕೊಂಡು ರಸ್ತೆಯಲ್ಲಿ ಇದ್ದಂತಹ ಬೀದಿ ದೀಪಗಳ ವೈಯರ್ ಗಳನ್ನು ಕಿತ್ತು ಹಾಕಿ ದೀಪಗಳನ್ನು ಒಡೆದು ಹಾಕಿದ್ದನು. ಅಲ್ಲದೆ ಅಮಲಿನಲ್ಲಿ ಅವಾಚ್ಯ ಶಬ್ದಗಳಿಂದ ರಸ್ತೆಯಲ್ಲಿ ಕೂಗಾಡುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದನು. ಈ ಹಿನ್ನೆಲೆಯಲ್ಲಿ ಅನಿಲ್ ಕುಮಾರ್ ಯಾಕೆ ಈ ರೀತಿ ಪದೇ ಪದೇ ಏರಿಯಾದಲ್ಲಿ ಗಲಾಟೆ ಮಾಡುತ್ತೀಯಾ ಎಂದು ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿದ್ದರು.
ಇದಾದ ಮರುದಿನ ಬೆಳಿಗ್ಗೆ ೯.೪೦ರ ಸಮಯದಲ್ಲಿ ತೋಟಕ್ಕೆ ಹೋಗಲು ಬೈಕ್ ತೆಗೆಯುತ್ತಿರುವಾಗ ಅನಿ ಅಲಿಯಾಸ್ ಅನಿಲ್ ಈತನು ಏಕಾಏಕಿ ಬಂದವನೇ ನಿನ್ನೆ ನನಗೆ ಬುದ್ಧಿ ಹೇಳಲು ಬರುತ್ತೀಯಾ ಎಂದು ಆರೋಪಿಸಿ ಏಕಾಏಕಿ ಮಚ್ಚಿನಿಂದ ಅನಿಲ್ ಕುಮಾರ್ ಅವರ ತಲೆಯ ಎಡಭಾಗಕ್ಕೆ ಹೊಡೆದಿದ್ದಾನೆ ಎನ್ನಲಾಗಿದೆ.
ತಕ್ಷಣವೇ ಸ್ಥಳೀಯರು ಗಲಾಟೆ ಬಿಡಿಸಿರುತ್ತಾರೆ, ನಂತರ ಅನಿಲ್ ಕುಮಾರ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನ್ಯೂಟೌನ್ ಠಾಣೆಯಲ್ಲಿ ದೂರು ದಾಖಲಾಗಿದೆ.
No comments:
Post a Comment