ಗುರುವಾರ, ಆಗಸ್ಟ್ 28, 2025

ಕಾಗದನಗರ ಕನ್ನಡ ಯುವಕರ ಸಂಘದ ೫೩ನೇ ವರ್ಷದ ವಿನಾಯಕ ಮಹೋತ್ಸವ

ಭದ್ರಾವತಿ ಕಾಗದನಗರದ ಕನ್ನಡ ಯುವಕರ ಸಂಘದ ವತಿಯಿಂದ ೫೩ನೇ ವರ್ಷದ ಅಂಗವಾಗಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ. 
    ಭದ್ರಾವತಿ : ಕಾಗದನಗರದ ಕನ್ನಡ ಯುವಕರ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ೫೩ನೇ ವರ್ಷದ ಗಣಪತಿ ಮೂರ್ತಿ ವಿಸರ್ಜನೆ ಆ.೩೧ರ ಭಾನುವಾರ ನಡೆಯಲಿದೆ.
    ಕನ್ನಡ ಯುವಕರ ಸಂಘ ತನ್ನದೇ ಆದ ಇತಿಹಾಸ ಹೊಂದಿದ್ದು, ಎಂಪಿಎಂ ಕಾರ್ಖಾನೆಯ ಕಾರ್ಮಿಕರು ಮತ್ತು ಅವರ ಕುಟುಂಬ ವರ್ಗ ಹಾಗು ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳ ನಿವಾಸಿಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಈ ಹಿಂದೆ ಪ್ರತಿ ವರ್ಷ ಗಣಪತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಈ ಭಾಗದಲ್ಲಿ ಹಬ್ಬದ ವಾತಾವರಣ ಕಂಡು ಬರುತ್ತಿತ್ತು. ಸಾವಿರಾರು ಮಂದಿ ಗಣಪತಿ ಮೂರ್ತಿ ವೀಕ್ಷಣೆಗೆ ಆಗಮಿಸುತ್ತಿದ್ದರು. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಹಾಗು ಮನರಂಜನೆ ಕಾರ್ಯಕ್ರಮಗಳು ಜರುಗುತ್ತಿದ್ದವು. ಸುಮಾರು ೧೦ ರಿಂದ ೧೫ ಸಾವಿರ ಮಂದಿ ಕಾರ್ಯಕ್ರಮ ವೀಕ್ಷಣೆಗಾಗಿ ಆಗಮಿಸುತ್ತಿದ್ದರು. ಅಲ್ಲದೆ ಲಾಟರಿ ಡ್ರಾ ಸಹ ಏರ್ಪಡಿಸಲಾಗುತ್ತಿತ್ತು. ಆದರೆ ಇದೀಗ ಎಲ್ಲವೂ ಇತಿಹಾಸದ ಪುಟದಲ್ಲಿ ಉಳಿದುಕೊಂಡಿವೆ.
    ಕಳೆದ ಸುಮಾರು ೧೦ ವರ್ಷಗಳಿಂದ ಎಂಪಿಎಂ ಕಾರ್ಖಾನೆ ಮುಚ್ಚಲ್ಪಟ್ಟಿದ್ದು, ಕಾರ್ಮಿಕರು ಕಾರ್ಖಾನೆಯ ವಸತಿ ಗೃಹಗಳನ್ನು ತೊರೆದಿದ್ದಾರೆ. ಈ ನಡುವೆ ಕೆಲವು ವಸತಿ ಗೃಹಗಳನ್ನು ಕಳೆದ ಸುಮಾರು ೩-೪ ವರ್ಷಗಳಿಂದ ಕ್ಷಿಪ್ರ ಕಾರ್ಯ ಪಡೆ(ಆರ್‌ಎಎಫ್) ಸಿಬ್ಬಂದಿಗಳಿಗೆ ನೀಡಲಾಗಿದ್ದು, ಬಹುತೇಕ ಸಿಬ್ಬಂದಿಗಳು ಹೊರ ರಾಜ್ಯದಿಂದ ಬಂದವರಾಗಿದ್ದಾರೆ. ಕಾರ್ಖಾನೆ ಒಳ ಭಾಗದಲ್ಲಿರುವ ಆಡಳಿತ ಕಛೇರಿಯ ಕೆಲವು ಕಟ್ಟಡಗಳನ್ನು ಕ್ಷಿಪ್ರ ಕಾರ್ಯ ಪಡೆ ಕಛೇರಿಗಳಿಗೆ ನೀಡಲಾಗಿದೆ. ಇದರಿಂದಾಗಿ ಈ ಭಾಗ ಸ್ವಲ್ಪ ಮಟ್ಟಿಗೆ ಜನ ವಸತಿ ಪ್ರದೇಶವಾಗಿ ಕಂಡು ಬರುತ್ತಿದೆ. ಉಳಿದಂತೆ ಕಾರ್ಖಾನೆಯ ಬಹುತೇಕ ವಸತಿ ಗೃಹಗಳು ಪಾಳು ಬಿದ್ದಿವೆ. ಖಾಲಿ ಜಾಗಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ.  ಆದರೂ ಈ ನಡುವೆ ಕೆಲವು ಯುವಕರು ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದು, ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಪುನಃ ಹಿಂದಿನ ವೈಭವ ಮರುಕಳುಹಿಸುವ ಆಶಾಭಾವನೆ ಹೊಂದಿದ್ದಾರೆ.
    ಈ ಬಾರಿ ೫ ದಿನಗಳ ಕಾಲ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿದ್ದು, ಕಾಗದನಗರದ ಪ್ರಮುಖ ರಸ್ತೆಗಳಲ್ಲಿ ಉತ್ಸವ ಮೆರವಣಿಗೆಯೊಂದಿಗೆ ಮೂರ್ತಿ ವಿಸರ್ಜನೆ ನಡೆಯಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ