Tuesday, July 21, 2020

ನಿವೇಶನ, ವಸತಿ ರಹಿತರಿಗೆ ಯೋಜನೆ ಕುರಿತು ಮಾಹಿತಿ ನೀಡದೆ ನಿರ್ಲಕ್ಷ್ಯತನ

ತಪ್ಪಿತಸ್ಥರ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ 

ಭದ್ರಾವತಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ನಿವೇಶನ ಹಾಗೂ ವಸತಿ ರಹಿತರಿಗೆ ಸರ್ಕಾರದ ಯೋಜನೆ ಕುರಿತು ಸರಿಯಾಗಿ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಗಳವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ತಾಲೂಕು ಪಂಚಾಯಿತಿ ಆಡಳಿತಕ್ಕೆ ವ್ಯವಸ್ಥಾಪಕ ಶಿವಕುಮಾರ್ ಮೂಲಕ ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಜು. ೨೧: ತಾಲೂಕಿನ ಗ್ರಾಮೀಣ ಭಾಗದಲ್ಲಿ ನಿವೇಶನ ಹಾಗೂ ವಸತಿ ರಹಿತರಿಗೆ ಸರ್ಕಾರದ ಯೋಜನೆ ಕುರಿತು ಸರಿಯಾಗಿ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಗಳವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ತಾಲೂಕು ಪಂಚಾಯಿತಿ ಆಡಳಿತಕ್ಕೆ ವ್ಯವಸ್ಥಾಪಕ ಶಿವಕುಮಾರ್ ಮೂಲಕ ಮನವಿ ಸಲ್ಲಿಸಲಾಯಿತು. 
ಸರ್ಕಾರದ ಆದೇಶದಂತೆ ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದ ಬಹಳ ವರ್ಷಗಳ ನಂತರ ಫೆ.೧೩, ೨೦೨೦ರಂದು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಮತ್ತು ನಿವೇಶನ ರಹಿತರು ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ಕಲ್ಪಿಸಿದ್ದು, ಶಿವಮೊಗ್ಗ ಜಿಲ್ಲಾ ಪಂಚಾಯತ್ ವತಿಯಿಂದ ಜೂ.೨೬, ೨೦೨೦ರಂದು ಎಲ್ಲಾ ತಾಲೂಕು ಪಂಚಾಯಿತಿಗಳಿಗೆ ಕೈಬಿಟ್ಟು ಹೋಗಿರುವ ಅರ್ಹ ಫಲಾನುಭವಿಗಳನ್ನು ನಿಗಮದ ವೆಬ್‌ಸೈಟ್‌ನಲ್ಲಿ ನಮೂದಿಸಲು ಆ.೩೧ರವರೆಗೂ ಕಾಲಾವಕಾಶ ಕಲ್ಪಿಸಲಾಗಿದೆ. 
ಈ ಕುರಿತು ಜು.೧ರಂದು ತಾಲೂಕಿನ ಎಲ್ಲಾ ೪೧ ಗ್ರಾಮ ಪಂಚಾಯಿತಿಗಳಿಗೆ ಸುತ್ತೋಲೆ ಹೊರಡಿಸಲಾಗಿದ್ದು, ಆದರೆ ಗ್ರಾಮ ಪಂಚಾಯಿತಿಗಳಲ್ಲಿ ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಯೋಜನೆ ಕುರಿತು ಗ್ರಾಮಗಳಲ್ಲಿ ಟಾಂಟಾಂ ಹೊಡೆಸಿ ಪ್ರಚಾರ ಮಾಡಿ ಯಾವುದೇ ನಿವೇಶನ ರಹಿತ ಫಲಾನುಭವಿಗಳು ಕೈಬಿಟ್ಟು ಹೋಗದಂತೆ ಕ್ರಮ ವಹಿಸಬೇಕಾಗಿದೆ. ಆದರೆ ಇದುವರೆಗೂ ಟಾಂಟಾಂ ಹೊಡೆಸಿಲ್ಲ. ಅಲ್ಲದೆ ಪ್ರತಿಕಾ ಪ್ರಚಾರ, ಭಿತ್ತಿಪತ್ತ ಹಂಚದೆ ಕರ್ತವ್ಯ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಲಾಗಿದೆ. 
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ವಸತಿ ಸಚಿವ ವಿ. ಸೋಮಣ್ಣ, ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್ ಈಶ್ವರಪ್ಪ ಈ ಸಂಬಂಧ ಗಮನ ಹರಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. 
ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್, ಉಪಾಧ್ಯಕ್ಷ ಬ್ರಹ್ಮಲಿಂಗಯ್ಯ, ಸಂಚಾಲಕರಾದ ಗಾಯಕ್‌ವಾಡ್, ಸುಬ್ಬೇಗೌಡ, ಆನಂದಮೂರ್ತಿ, ರಾಮಾನಾಯ್ಕ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

No comments:

Post a Comment