ಭಾವಸಾರ ಕ್ಷತ್ರಿಯ ಸಮಾಜ, ಭಾವಸಾರ ಮಹಿಳಾ ಮಂಡಳಿ, ಭಾವಸಾರ ಯುವಕ ಸಂಘ ಮತ್ತು ಭಾವಸಾರ ವಿಷನ್ ಇವುಗಳ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ನಂಜಪ್ಪ ಲೈಫ್ ಕೇರ್ ಸಹಯೋಗದೊಂದಿಗೆ ಭದ್ರಾವತಿ ತರೀಕೆರೆ ರಸ್ತೆಯ ಶ್ರೀ ಪಾಂಡುರಂಗ ಮಂದಿರಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಶಿವಮೊಗ್ಗ ನಂಜಪ್ಪ ಆಸ್ಪತ್ರೆ ವೈದ್ಯೆ ಡಾ. ಶಾಂತಲ, ಸಮಾಜದ ಅಧ್ಯಕ್ಷ ಡಿ.ಕೆ ರಾಘವೇಂದ್ರ ರಾವ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ : ಕುಟುಂಬದಲ್ಲಿ ಮಹಿಳೆ ಆರೋಗ್ಯವಾಗಿದ್ದರೆ ಆ ಕುಟುಂಬ ನೆಮ್ಮದಿ, ಶಾಂತಿಯಿಂದ ಇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಒಂದು ವೇಳೆ ಕುಟುಂಬದ ಮಹಿಳೆ ಆನಾರೋಗ್ಯಕ್ಕೆ ಒಳಗಾದಲ್ಲಿ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಕುಟುಂಬದಲ್ಲಿ ಮಹಿಳೆಯರ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕೆಂದು ಶಿವಮೊಗ್ಗ ನಂಜಪ್ಪ ಆಸ್ಪತ್ರೆ ವೈದ್ಯೆ ಡಾ. ಶಾಂತಲ ಹೇಳಿದರು.
ಅವರು ನಗರದ ಭಾವಸಾರ ಕ್ಷತ್ರಿಯ ಸಮಾಜ, ಭಾವಸಾರ ಮಹಿಳಾ ಮಂಡಳಿ, ಭಾವಸಾರ ಯುವಕ ಸಂಘ ಮತ್ತು ಭಾವಸಾರ ವಿಷನ್ ಇವುಗಳ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ನಂಜಪ್ಪ ಲೈಫ್ ಕೇರ್ ಸಹಯೋಗದೊಂದಿಗೆ ತರೀಕೆರೆ ರಸ್ತೆಯ ಶ್ರೀ ಪಾಂಡುರಂಗ ಮಂದಿರಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾಜದಲ್ಲಿ ಇಂದು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಆರೋಗ್ಯದ ಸಮಸ್ಯೆಗಳು ಕಾಣಿಸುತ್ತಿವೆ. ಅವರ ತಮ್ಮ ಮಾಸಿಕ ಋತು ಚಕ್ರ, ಶುಚಿತ್ವ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಆರೋಗ್ಯದಲ್ಲಿ ಏನಾದರೂ ಸಮಸ್ಯೆಗಳು ಕಾಣಿಕೊಂಡಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಕಾಯಿಲೆ ಉಲ್ಬಣವಾಗಿ ಹೆಚ್ಚಿನ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಸ್ತುತ ಜೀವನ ಕ್ರಮ ಸರಿಯಾದ ನಿಟ್ಟಿನಲ್ಲಿ ಸಾಗಬೇಕು. ಅದರಲ್ಲೂ ನಾವು ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮಗಳನ್ನುಂಟು ಮಾಡುತ್ತವೆ. ಪ್ರಸ್ತುತ ಜಂಕ್ ಫುಡ್‌ಗಳ ಬಳಕೆ ಹೆಚ್ಚುತ್ತಿದೆ. ಶ್ರಮದಾಯಕ ಕೆಲಸಗಳನ್ನು ಮಾಡದೆ ಕುಳಿತಲ್ಲೆ ಗಂಟೆಗಟ್ಟಲೆ ಕೆಲಸಗಳನ್ನು ಮಾಡುತ್ತಿರುವ ಕಾರಣ ಹಲವಾರು ರೀತಿಯ ಕಾಯಿಲೆಗಳು ಕಂಡು ಬರುತ್ತಿವೆ. ಅದರಲ್ಲೂ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಗರ್ಭಕೊರಳ ಹಾಗು ಗರ್ಭಕಂಠ ಕ್ಯಾನ್ಸರ್ ಸರ್ವೆ ಸಾಮಾನ್ಯವಾಗಿ ಕಂಡು ಬರುತ್ತಿವೆ. ಈ ಕಾಯಿಲೆಗಳ ಗುಣ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಂಡು ಆರಂಭದ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಸಲಹೆ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ಗೆ ಆಧುನಿಕ ಚಿಕಿತ್ಸೆಗಳು ಕಂಡು ಹಿಡಿಯಲಾಗಿದೆ. ಅದರಲ್ಲೂ ೯-೧೩ ವರ್ಷ ಹಾಗು ೨೫ನೇ ವರ್ಷದವರಿಗೆ ಕ್ಯಾನ್ಸರ್ ನಿರೋಧಕ ಚುಚ್ಚುಮದ್ದು ನೀಡುವ ಮೂಲಕ ಭವಿಷ್ಯದಲ್ಲಿ ಕ್ಯಾನ್ಸರ್ ಬರುವ ಅಪಾಯ ಕಡಿಮೆಗೊಳಿಸಲಾಗುತ್ತಿದೆ ಎಂದರು.
ಸಮಾಜದ ಅಧ್ಯಕ್ಷ ಡಿ.ಕೆ ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು. ಭಾವಸಾರ ಸಹಕಾರ ಸಂಘದ ಅಧ್ಯಕ್ಷ ಟಿ.ಎಸ್ ದುಗ್ಗೇಶ್ ಶಿಬಿರ ಉದ್ಘಾಟಿಸಿದರು. ಡಾ.ಕಾವ್ಯ, ಶಿಲ್ಪಾ, ಕಲ್ಪನಾ, ರಘುಪತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಾವಸಾರ ಯುವಕ ಮಂಡಳಿಯವರು ಶಿಬಿರದ ಔಷಧ ವಿತರಣೆ ಪ್ರಾಯೋಜಕತ್ವ ವಹಿಸಿಕೊಂಡಿದ್ದರು. ಶಿಬಿರದಲ್ಲಿ ಸುಮಾರು ೧೨೦ಕ್ಕೂ ಹೆಚ್ಚು ಜನರು ಭಾಗವಹಿಸಿ ಸದುಪಯೋಗ ಪಡೆದುಕೊಂಡರು.
ಸ್ವಪ್ನಕುಮಾರ್ ತೇಲ್ಕರ್ ಪ್ರಾರ್ಥಿಸಿ, ವಿಶ್ವನಾಥ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಲ್ಪನಾ ವಂದಿಸಿದರು.
No comments:
Post a Comment