Wednesday, July 26, 2023

ಮಕ್ಕಳಿಗೆ ಸೈನಿಕರ ಹೋರಾಟ, ಬದುಕು ತಿಳಿಯಲಿ : ಸುಬೇದಾರ್‌ ಗುಲ್ಗುಲೆ

ಭದ್ರಾವತಿ ಬಾರಂದೂರು  ಹಳ್ಳಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಕಾರ್ಗಿಲ್ ವಿಜಯೋತ್ಸವ ದಿನ ಆಚರಿಸಲಾಯಿತು.
    ಭದ್ರಾವತಿ, ಜು. ೨೬: ಕಾರ್ಗಿಲ್‌ ಯುದ್ಧದಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದ್ದು, ನಮ್ಮ ಮಕ್ಕಳಿಗೆ ಸೈನಿಕರ ಹೋರಾಟ ಮತ್ತು ಬದುಕು ಕುರಿತು ತಿಳಿಸಿಕೊಡುವ ಅಗತ್ಯವಿದೆ ಎಂದು ಸುಬೇದಾರ್ ಗುಲ್ಗುಲೆ ಹೇಳಿದರು.
    ಅವರು ಬುಧವಾರ ಬಾರಂದೂರು  ಹಳ್ಳಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ನನಗೆ ಕಾರ್ಗಿಲ್‌ ಯುದ್ಧದಲ್ಲಿ ಪಾಲ್ಗೊಳ್ಳಲು ಅವಕಾಶ ಲಭಿಸಿತ್ತು. ಇದು ಹೆಮ್ಮೆ ಪಡುವ ವಿಚಾರವಾಗಿದೆ. ಮೈನಡುಗಿಸುವ ಚಳಿಯಲ್ಲಿ ಮೋಸದಿಂದ ದೇಶದ ಗಡಿ ನುಸುಳಿದಂತಹ ವೈರಿಗಳ ಆಕ್ರಮಣ, ಎದುರಿಸಿದ ಸಂಕಷ್ಟ.  ವೀರ ಯೋಧರ ಸಾಹಸದ ಹೋರಾಟ ಅದ್ಭುತವಾಗಿದೆ ಎಂದರು.     ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದಂತಹ ಹುತಾತ್ಮ ಯೋಧರನ್ನು ಸ್ಮರಿಸಿ ಗೌರವ ಸಮರ್ಪಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
    ತಾಲೂಕು ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ವೆಂಕಟಗಿರಿ ಮಾತನಾಡಿ,  26 ಜುಲೈ ಎಂದರೆ ಅಖಂಡ ಭಾರತದ ವಿಜಯೋತ್ಸವ.  ನಮ್ಮ ಸೈನಿಕರು ಪ್ರಾಣವನ್ನು ಲೆಕ್ಕಿಸದೆ ಸದಾ ದೇಶಕ್ಕಾಗಿ ಹೋರಾಡಲು  ಸಿದ್ಧರಾಗಿ ಗಡಿ ಕಾಯುತ್ತಿರುವ ಪರಿಣಾಮ  ನಾವೆಲ್ಲ ನೆಮ್ಮದಿಯಾಗಿರುವುದಕ್ಕೆ ಸಾಧ್ಯವಾಗಿದೆ. ಇದೀಗ  ಮಹಿಳೆಯರಿಗೂ ಸೈನ್ಯ ಸೇರುವ ಅವಕಾಶವಿದೆ. ಮಕ್ಕಳು ಬಾಲ್ಯದಿಂದಲೇ ದೇಶ ಭಕ್ತಿ, ಅಭಿಮಾನ, ಶಿಸ್ತು ಮೈಗೂಡಿಸಿಕೊಳ್ಳಬೇಕೆಂದರು.
    ಶಾಲೆಯ ಮುಖ್ಯೋಪಾಧ್ಯಾಯ ಎಚ್. ಶೇಖರಪ್ಪ, ಮಾಜಿ ಸೈನಿಕ ಹರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ಮಾತನಾಡಿದರು.
    ಸಂಘದ ಖಜಾಂಚಿ ಬೋರೇಗೌಡ, ನಿರ್ದೇಶಕ ಮುದುಗಲ ರಾಮರೆಡ್ಡಿ,  ಸದಸ್ಯರಾದ ಪಿ.ಕೆ ಹರೀಶ್, ಅಭಿಲಾಶ್, ಕೃಷ್ಣೋಜಿ ರಾವ್, ಸುರೇಶ್, ರಾಮಚಂದ್ರ, ಉದಯ್, ದೇವರಾಜ್, ದಿವಾಕರ್, ಸತೀಶ್, ಪ್ರಸಾದ್, ಮಣಿ, ವೆಂಕಟೇಶ್, ಶ್ರೀನಿವಾಸ್,  ಸಮಾಜಸೇವಕರಾದ ಸುಲೋಚನಾ ಪ್ರಕಾಶ್ ಹಾಗೂ ಕವಿತಾ ರಾವ್,  ಜನತಾ ಪ್ರೌಢಶಾಲೆ ಶಿಕ್ಷಕರ ಕಾಂತರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
  ವಿದ್ಯಾರ್ಥಿನಿಯರಾದ ಪ್ರೀತಿ ಹಾಗೂ ಗೌತಮಿ ಸೈನಿಕರ ಕುರಿತು ಮಾತನಾಡಿದರು. ಮಕ್ಕಳಿಂದ ದೇಶಭಕ್ತಿ ಗೀತೆ ಗಾಯನ ನಡೆಯಿತು.  ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ರಾಹುಲ್ ಮತ್ತು  ದೀಪಿಕಾ  ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಶಿಕ್ಷಕಿಯರಾದ ಪಾರ್ವತಿ ಪ್ರಾರ್ಥಿಸಿ, ತನುಜ ಸ್ವಾಗತಿಸಿ, ಪವಿತ್ರ ಅವರು ವಂದಿಸಿದರು.

No comments:

Post a Comment