ಹಳೇನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಭದ್ರಾವತಿ ನಗರದಲ್ಲಿ ಪುನಃ ಸಾವಿರಾರು ಗೋವುಗಳ ಮೂಳೆ ತ್ಯಾಜ್ಯ ಭದ್ರಾ ನದಿ ದಡದಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.
ಭದ್ರಾವತಿ: ನಗರದಲ್ಲಿ ಪುನಃ ಸಾವಿರಾರು ಗೋವುಗಳ ಮೂಳೆ ತ್ಯಾಜ್ಯ ಭದ್ರಾ ನದಿ ದಡದಲ್ಲಿ ಪತ್ತೆಯಾಗಿರುವ ಘಟನೆ ನಡೆದಿದ್ದು, ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಸಹ ಇಲ್ಲಿ ಮಾತ್ರ ಗೋ ಹತ್ಯೆ ನಿರಂತರವಾಗಿ ನಡೆಯುತ್ತಿದ್ದು, ಗೋ ಹತ್ಯೆ ಮಾಡುವವರನ್ನು ತಡೆಯಲು ಯಾರಿಗೂ ಸಾಧ್ಯವಾಗಿಲ್ಲ ಎಂಬ ಆರೋಪ ಇಲ್ಲಿನ ಹಿಂದೂಪರ ಸಂಘಟನೆಗಳಿಂದ ಕೇಳಿ ಬರುತ್ತಿದೆ. ಇದಕ್ಕೆ ಎಂಬಂತೆ ಹಲವಾರು ಘಟನೆಗಳು ನಡೆದಿದ್ದು, ಅಲ್ಲದೆ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಪೊಲೀಸ್ ವ್ಯವಸ್ಥೆ ವೈಫಲ್ಯವೋ ಅಥವಾ ಆಡಳಿತ ವ್ಯವಸ್ಥೆಯಲ್ಲಿನ ವೈಫಲ್ಯವೋ ಎಂದು ಹಿಂದೂಪರ ಸಂಘಟನೆಗಳ ಮುಖಂಡರು ಪ್ರಶ್ನಿಸಿದ್ದಾರೆ.
ಪ್ರಸ್ತುತ ಒಂದೆಡೆ ರಾಜ್ಯದಲ್ಲಿ ಗೋವುಗಳ ಕೆಚ್ಚಲು ಕೊಯ್ದ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಇಂತಹ ಸಂದರ್ಭದಲ್ಲಿ ಇದೀಗ ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹಳೇ ಸೀಗೇಬಾಗಿ ಭದ್ರಾ ನದಿ ದಡದಲ್ಲಿ ಸಾವಿರಾರು ಗೋವುಗಳ ತಲೆ ಬುರುಡೆಗಳು, ಕೊಂಬುಗಳು ಹಾಗು ಗೋವುಗಳ ದೇಹದ ಇನ್ನಿತರ ಭಾಗದ ಮೂಳೆಗಳು ಪತ್ತೆಯಾಗಿವೆ.
ಗೋವುಗಳ ಮೂಳೆಗಳು ಎಲ್ಲಿ, ಯಾವಾಗ ಪತ್ತೆ?
ಹಿಂದೂಪರ ಸಂಘಟನೆಯ ಮುಖಂಡ ದೇವರಾಜರವರು ಜ.೧೮ರಂದು ಸಂಜೆ ೪ ಗಂಟೆ ಸಮಯದಲ್ಲಿ ಸ್ನೇಹಿತರಾದ ಯೇಸುಕುಮಾರ್ ಮತ್ತು ತೀರ್ಥೇಶ್ ಅವರೊಂದಿಗೆ ಹೊಳೆಹೊನ್ನೂರು ರಸ್ತೆ, ಹಳೇ ಸೀಗೆಬಾಗಿ ಕಡೆಗೆ ಹೋಗುವ ಕ್ರಾಸ್ ಹತ್ತಿರದ ಬಸ್ ನಿಲ್ದಾಣ ಎದುರುಗಡೆ ಅಡಕೆ ತೋಟದ ಹಿಂಭಾಗಕ್ಕೆ ಹೋದಾಗ ಭದ್ರಾ ನದಿ ದಡದಲ್ಲಿ ಸಾವಿರಾರು ಗೋವುಗಳ ಮೂಳೆಗಳು ಪತ್ತೆಯಾಗಿವೆ. ಮೂಳೆಗಳ ರಾಶಿ ಸುತ್ತ ಟಾರ್ಪಲ್‌ನಿಂದ ಮರೆ ಮಾಡಿರುವುದು ಕಂಡು ಬಂದಿದೆ.
ಈ ಸಂಬಂಧ ದೇವರಾಜರವರು ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮೂಳೆಗಳ ರಾಶಿಯಿಂದ ದುರ್ವಾಸನೆ ಬರುತ್ತಿದ್ದು, ಅಲ್ಲದೆ ಅಪಾಯಕಾರಿಯಾದ ರೋಗದ ಸೋಂಕುಗಳು ಹರಡುವ ಭೀತಿ ಉಂಟಾಗಿದೆ. ಅಲ್ಲದೆ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಆದರೂ ಸಹ ಗೋವುಗಳನ್ನು ಹತ್ಯೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಮೂಳೆಗಳನ್ನು ಸಂಗ್ರಹಿಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ನಗರದಲ್ಲಿ ಗೋವಿನ ರಾಶಿ ರಾಶಿ ಮೂಳೆಗಳನ್ನು ಶೆಡ್‌ನಲ್ಲಿ ಸಂಗ್ರಹಿಸಿಡಲಾಗಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಮತ್ತೊಂದು ಪ್ರಕರಣದಲ್ಲಿ ಗೋವಿನ ತ್ಯಾಜ್ಯ ಚೀಲಗಳಲ್ಲಿ ತುಂಬಿ ಭದ್ರಾ ನದಿ ದಡದಲ್ಲಿ ಎಸೆದಿರುವುದು ಪತ್ತೆಯಾಗಿತ್ತು. ಈ ನಡುವೆ ಗೋವುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿ ಸಿಕ್ಕಿ ಬಿದ್ದಿರುವ ಘಟನೆಗಳು ಸಹ ನಡೆದಿವೆ.
No comments:
Post a Comment