ಭದ್ರಾವತಿ: ಯಾವುದೇ ಪರವಾನಗಿ ಪಡೆಯದೆ ಸಿಡಿಮದ್ದು ಬಳಸಿ ಅಕ್ರಮವಾಗಿ ಕಲ್ಲು ಬಂಡೆ ಸ್ಪೋಟಿಸಿ ಕಲ್ಲು ಸಾಗಾಣಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ೪ ಮಂದಿಗೆ ೧ ವರ್ಷಗಳ ಕಾಲ ಸಾದಾ ಸೆರೆವಾಸ ಹಾಗು ತಲಾ ೨೦,೦೦೦ ರು. ದಂಡ ವಿಧಿಸಿ ತೀರ್ಪು ನೀಡಿದೆ.
ಗುರುಮೂರ್ತಿ, ಧರ್ಮಪ್ಪ, ಸತೀಶ ಮತ್ತು ಹರಿಕೃಷ್ಣ ಶಿಕ್ಷೆಗೊಳಗಾದವರು. ನ್ಯಾಯಾಧೀಶರಾದ ಇಂದಿರ ಮೈಲಸ್ವಾಮಿ ಚೆಟ್ಟಿಯಾರ್ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ರತ್ನಮ್ಮ ವಾದ ಮಂಡಿಸಿದ್ದರು. ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಪ್ರಕರಣದ ವಿವರ:
ಈ ನಾಲ್ವರು ಅಪರಾಧಿಗಳು ತಾಲೂಕಿನ ಅತ್ತಿಗುಂದ ಗ್ರಾಮದ ಸರ್ವೆ ನಂ.೭೬ರಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿ ಪಡೆಯದೆ ಕಲ್ಲುಬಂಡೆಗಳನ್ನು ಸ್ಪೋಟಿಸಿ ಕಲ್ಲು ಸಾಗಾಣಿಕೆ ಮಾಡಿ ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಆಧಾರದ ಮೇರೆಗೆ ೧೯-೦೮-೨೦೧೬ರಂದು ದಾಳಿ ನಡೆಸಲಾಗಿತ್ತು. ದಾಳಿ ಸಂದರ್ಭದಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿತ್ತು. ಅಲ್ಲದೆ ಸ್ಪೋಟಕಕ್ಕೆ ಬಳಸಿದ ೫ ಕೇಪುಗಳು, ೨ ತೋಟಗಳು, ಒಂದು ಮೀಟರ್ ಉದ್ದದ ಬತ್ತಿ, ಒಂದು ಹಿಡಿಯಷ್ಟು ಉಪ್ಪು ಹಾಗು ೩ ಸುತ್ತಿಗೆಗಳು, ಮೂರು ಹಾರೆಕೋಲುಗಳು ಹಾಗು ೧ ಟ್ರ್ಯಾಕ್ಟರ್ ಮತ್ತು ೧ ದ್ವಿಚಕ್ರ ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಅಂದಿನ ಗ್ರಾಮಾಂತರ ವೃತ್ತ ನಿರೀಕ್ಷಕರಾಗಿದ್ದ ಬಿ. ಅಶೋಕ್ ಕುಮಾರ್ ತನಿಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ತನಿಖಾ ತಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ೪ ಅರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು. ಸುಮಾರು ೮ ವರ್ಷಗಳ ವಿಚಾರಣೆ ನಂತರ ಇದೀಗ ತೀರ್ಪು ಹೊರ ಹೊರಬಿದ್ದಿದೆ.
No comments:
Post a Comment