ಭದ್ರಾವತಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ನ್ಯೂಟೌನ್ ಸಿಲ್ವರ್ ಜ್ಯೂಬಿಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಾಗು ಹೊಸ ಸೇತುವೆ ರಸ್ತೆ ಸಿದ್ದರೂಢನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಕಾರ್ಯಾಗಾರ, ಸರ್ಕಾರಿ ನೌಕರರ ತಾಲೂಕು ಮಟ್ಟದ ಸಮ್ಮೇಳನ ಮತ್ತು ಮಹಿಳಾ ದಿನಾಚರಣೆ ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
ಭದ್ರಾವತಿ, ಮಾ. ೧೧ : ಮಹಿಳೆ ಮತ್ತು ಪುರುಷ ಇಬ್ಬರು ಸಹ ಸಮಾನತೆ ಕಾಯ್ದುಕೊಂಡು, ದುಡಿಮೆ ಕೈಗೊಂಡಾಗ ದೇಶದ ಅಭಿವೃದ್ಧಿ ಸಾಧ್ಯ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ಅವರು ಶನಿವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ನ್ಯೂಟೌನ್ ಸಿಲ್ವರ್ ಜ್ಯೂಬಿಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಾಗು ಹೊಸ ಸೇತುವೆ ರಸ್ತೆ ಸಿದ್ದರೂಢನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಕಾರ್ಯಾಗಾರ, ಸರ್ಕಾರಿ ನೌಕರರ ತಾಲೂಕು ಮಟ್ಟದ ಸಮ್ಮೇಳನ ಮತ್ತು ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ನೌಕರರು ಮಹಿಳಾ ದಿನಾಚರಣೆ ಆಚರಿಸುವ ಮೂಲಕ ಸಮಾಜದಲ್ಲಿ ಸಮಾನ ದುಡಿಮೆ ಪರಿಕಲ್ಪನೆ ಮೂಡಿಸುತ್ತಿರುವುದು ಶ್ಲಾಘನೀಯವಾಗಿದ್ದು, ೧೨ನೇ ಶತಮಾನದಲ್ಲಿಯೇ ಅಕ್ಕ ಮಹಾದೇವಿಯವರು ಸಮಾಜದಲ್ಲಿ ಸ್ತ್ರೀ ಮತ್ತು ಪುರುಷರ ನಡುವಿನ ಸಮಾನತೆಗಾಗಿ ಶ್ರಮಿಸಿದ್ದರು. ಇಂತಹ ಮಹಾನ್ ಆದರ್ಶ ಮಹಿಳೆಯ ಸುಮಾರು ೬೦ ಅಡಿ ಎತ್ತರದ ಪ್ರತಿಮೆಯನ್ನು ಅವರ ಜನ್ಮ ಸ್ಥಳ ಶಿಕಾರಿಪುರ ಉಡುತಡಿಯಲ್ಲಿ ಸುಮಾರು ೧ ಎಕರೆ ಜಾಗದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಮುಂದಿನ ತಿಂಗಳು ೧೭ರಂದು ಇದರ ಲೋಕಾರ್ಪಣೆ ನಡೆಯಲಿದೆ ಎಂದರು.
ಸರ್ಕಾರಿ ನೌಕರರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಕ್ಷೇತ್ರದ ಬೆಳವಣಿಗೆಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಮಾತನಾಡಿ, ಸರ್ಕಾರಿ ನೌಕರರ ಬಹಳಷ್ಟು ಬೇಡಿಕೆಗಳು ಈಡೇರುವಲ್ಲಿ ಮಾಜಿ ಬಿ.ಎಸ್ ಯಡಿಯೂರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರರವರ ಸಹಕಾರ ಹೆಚ್ಚಿನದ್ದಾಗಿದೆ. ಇತ್ತೀಚೆಗೆ ೭ನೇ ವೇತನ ಆಯೋಗ ಜಾರಿಗೆ ಹಾಗು ಎನ್‌ಪಿಎಸ್ ಪಿಂಚಣಿ ರದ್ದುಗೊಳಿಸಲು ಒತ್ತಾಯಿಸಿ ನಡೆಸಿದ ಹೋರಾಟದ ಪರಿಣಾಮವಾಗಿ ಶೇ.೧೭ರಷ್ಟು ವೇತನ ಹೆಚ್ಚಳವಾಗಿದ್ದು, ಅಲ್ಲದೆ ಎನ್‌ಪಿಎಸ್ ರದ್ದುಗೊಳಿಸುವ ನಿಟ್ಟಿನಲ್ಲಿ ಸಮಿತಿ ರಚಿಸಿ ವರದಿ ಪಡೆಯುವುದಾಗಿ ಸರ್ಕಾರ ಭರವಸೆ ನೀಡಿದೆ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಇನ್ನಷ್ಟು ಬಲಗೊಳ್ಳಬೇಕೆಂದರು.
ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಕ್ಷೇತ್ರದ ಶಾಸಕನಾಗಿ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸ್ಪಂದಿಸುವುದಾಗಿ ಭರವಸೆ ನೀಡಿ ಬೆಂಬಲಿಸುವಂತೆ ಮನವಿ ಮಾಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ವಿಇಎಸ್ ವಿದ್ಯಾಸಂಸ್ಥೆ ಆಡಳಿತ ಭವನ ನಿರ್ಮಾಣಕ್ಕೆ ೧ ಕೋ. ರು. ಹಾಗು ಗುರುಭವನ ನಿರ್ಮಾಣಕ್ಕೆ ೨ ಕೋ. ರು. ಮತ್ತು ಸಿಲ್ವರ್ ಜ್ಯೂಬಿಇ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ನೂತನ ಕಟ್ಟಡ ನಿರ್ಮಾಣಕ್ಕೆ ಸುಮಾರು ೩ ಕೋ. ರೂ. ಸೇರಿದಂತೆ ಒಟ್ಟು ೬ ಕೋ.ರು ವೆಚ್ಚದ ಕಾಮಗಾರಿಗಳಿಗೆ ಸರ್ಕಾರದಿಂದ ಅನುದಾನ ಮಂಜೂರಾತಿ ಮಾಡಿಸಿಕೊಡುವಲ್ಲಿ ಸಂಘದ ರಾಜ್ಯಾಧ್ಯಕ್ಷರು, ಸಂಸದರು, ಶಾಸಕರ ಪ್ರಯತ್ನ ಹೆಚ್ಚಿನದ್ದಾಗಿದೆ. ಶಿವಮೊಗ್ಗ ನಗರದಂತೆ ಭದ್ರಾವತಿ ಸಹ ಎಲ್ಲಾ ರೀತಿಯಿಂದಲೂ ಅಭಿವೃದ್ಧಿ ಹೊಂದಬೇಕು. ಈ ನಿಟ್ಟಿನಲ್ಲಿ ಸಂಸದರು ಹೆಚ್ಚಿನ ಗಮನ ನೀಡಬೇಕೆಂದು ಮನವಿ ಮಾಡಿದರು.
ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ವಿಇಎಸ್ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಪದಾಧಿಕಾರಿಗಳು, ಸರ್ಕಾರಿ ನೌಕರರ ಸಂಘದ ವಿವಿಧ ಸಂಘಟನೆಗಳು ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment