ಭದ್ರಾವತಿ ಸಿದ್ಧಾರೂಢ ನಗರದ ಧರ್ಮಶ್ರೀ ಸಭಾಭವನದಲ್ಲಿ ಭಾರತೀಯ ಮಜ್ದೂರ್ ಸಂಘ(ಬಿಎಂಎಸ್) ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವಕರ್ಮ ಜಯಂತಿ, ರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಹಾಗು ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಇ-ಶ್ರಮ್ ಕಾರ್ಡ್‌ಗಳನ್ನು ವಿತರಿಸಲಾಯಿತು.
ಭದ್ರಾವತಿ, ಸೆ. ೧೮: ದುಡಿಯುವ ಪ್ರತಿಯೊಬ್ಬರು ಸಹ ದೇಶದ ಅಭಿವೃದ್ಧಿಗೆ ಕಾರಣಕರ್ತರಾಗಿದ್ದು, ದುಡಿಯುವ ಎಲ್ಲಾ ವರ್ಗದ ಜನರನ್ನು ಕಾರ್ಮಿಕರೆಂದು ಗುರುತಿಸಬೇಕೆಂಬುದು ಭಾರತೀಯ ಮಜ್ದೂರ್ ಸಂಘದ ಆಶಯವಾಗಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಎಚ್.ಎಲ್ ವಿಶ್ವನಾಥ್ ಹೇಳಿದರು.
ಅವರು ಭಾನುವಾರ ಸಿದ್ಧಾರೂಢ ನಗರದ ಧರ್ಮಶ್ರೀ ಸಭಾಭವನದಲ್ಲಿ ಭಾರತೀಯ ಮಜ್ದೂರ್ ಸಂಘ(ಬಿಎಂಎಸ್) ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವಕರ್ಮ ಜಯಂತಿ, ರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಹಾಗು ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ಎಲ್ಲಾ ಕಾರ್ಮಿಕರ ಕೊಡುಗೆ ಇದ್ದು, ದುಡಿಯುವ ಎಲ್ಲಾ ವರ್ಗದ ಜನರನ್ನು ಗುರುತಿಸಿ ಅವರ ಪರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಕೇವಲ ಕಾರ್ಖಾನೆಗಳಲ್ಲಿ ದುಡಿಯುವವರು ಮಾತ್ರ ಕಾರ್ಮಿಕರು ಎಂಬ ನಿಲುವು ಬದಲಾಗಬೇಕು. ಮಜ್ದೂರು ಸಂಘ ಈ ದೇಶದ ಇತಿಹಾಸ ಅಧ್ಯಾಯನ ನಡೆಸುವ ಮೂಲಕ ರಾಜಮಹಾರಾಜರ ಕಾಲದಲ್ಲಿನ ಕಾರ್ಮಿಕರ ಸ್ಥಿತಿಗತಿಗಳನ್ನು ಸಹ ಅರಿತುಕೊಂಡಿದೆ. ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುವ ಜೊತೆಗೆ ಎಲ್ಲಾ ಕಾರ್ಮಿಕರ ಹಿತ ಕಾಪಾಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಮಜ್ದೂರು ಸಂಘ ಹಲವಾರು ಹೋರಾಟಗಳನ್ನು ಯಶಸ್ವಿಯಾಗಿ ನಡೆಸುವ ಮೂಲಕ ಕಾರ್ಮಿಕರ ಹಲವು ಬೇಡಿಕೆಗಳನ್ನು ಈಡೇರಿಸಿಕೊಟ್ಟಿದೆ. ಯಾವುದೇ ಸರ್ಕಾರವಿರಲಿ ಎಲ್ಲಾ ಕಾರ್ಮಿಕರ ಹಿತಕಾಪಾಡಬೇಕು. ದುಡಿಯುವ ವರ್ಗವನ್ನು ಪ್ರೋತ್ಸಾಹಿಸಬೇಕು. ಮಾನವ ಸಂಪನ್ಮೂಲ ಹೊಂದಿರುವ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿದರು.
ನ್ಯಾಯವಾದಿ ಮಂಗೋಟೆ ರುದ್ರೇಶ್ ಮಾತನಾಡಿ, ಪ್ರಸ್ತುತ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಎಲ್ಲಾ ಕಾರ್ಮಿಕರನ್ನು ಗುರುತಿಸಿ ಅವರ ಏಳಿಗೆಗೆ ಶ್ರಮಿಸುತ್ತಿವೆ. ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುವ ಮೂಲಕ ಅವರ ಹಿತರಕ್ಷಣೆಗೆ ಮುಂದಾಗಿವೆ. ಈ ನಡುವೆ ಬಿಎಂಎಸ್ ಕಾರ್ಮಿಕರ ಪರವಾಗಿ ಹೋರಾಟ ನಡೆಸುವ ಮೂಲಕ ಅವರ ಬೇಡಿಕೆಗಳನ್ನು ಈಡೇರಿಸಿಕೊಡುವಲ್ಲಿ ಯಶಸ್ವಿಯಾಗಿದೆ ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಉದ್ಯಮಿ ನಟರಾಜ್ ಭಾಗವತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ಅಧ್ಯಕ್ಷ ಎಚ್. ಪುರಷೋತ್ತಮ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆ ಸಭಾ ಕಾರ್ಯಕ್ರಮಕ್ಕೂ ಮೊದಲು ರಂಗಪ್ಪ ವೃತ್ತದಿಂದ ಧರ್ಮಶ್ರೀ ಸಭಾಭವನದವರೆಗೂ ಕಾರ್ಮಿಕರ ಜಾಥಾ ನಡೆಯಿತು. ಭಾರತೀಯ ಮಜ್ದೂರ್ ಸಂಘದ ಉಪಾಧ್ಯಕ್ಷ ಎಂ. ರಾಘವೇಂದ್ರ, ಕಾರ್ಯಾಧ್ಯಕ್ಷ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಪಚ್ಚಿಯಪ್ಪ, ಕಾರ್ಯದರ್ಶಿ ಪ್ರವೀಣ್ ಕುಮಾರ್, ಖಜಾಂಚಿ ಪ್ಯಾಟ್ರಿಕ್, ಸಂಘಟನಾ ಕಾರ್ಯದರ್ಶಿಗಳಾದ ಡಿ. ಜಯರಾಮ, ರಂಗಸ್ವಾಮಿ, ಎಚ್. ಜಯರಾಮ, ಪಿ. ಸುಂದರ್, ಬಿ. ನಾಗರಾಜ್, ಸತೀಶ್, ಸುರೇಶ್ ಮೇಸ್ತ್ರಿ, ಮಂಜುನಾಥ್ ಶೇಖರ್, ಅಭಿ ಸೇರಿದಂತೆ ಇನ್ನಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.
No comments:
Post a Comment