ಸಿ.ಎಂ ಇಬ್ರಾಹಿಂ
* ಅನಂತಕುಮಾರ್
ಭದ್ರಾವತಿ: ಕೇಂದ್ರ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಜನತಾದಳ (ಜಾತ್ಯಾತೀತ) ಪಕ್ಷಕ್ಕೆ ಸೇರ್ಪಡೆಗೊಂಡು ರಾಜ್ಯಾಧ್ಯಕ್ಷರಾಗಿ ಭಾನುವಾರ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಕ್ಷೇತ್ರದಲ್ಲಿ ರಾಜಕೀಯ ಭಿನ್ನಮತ ಮತ್ತಷ್ಟು ಸ್ಪೋಟಗೊಳ್ಳುತ್ತಿದ್ದು, ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಶಾರದ ಅಪ್ಪಾಜಿಗೆ ಹಿನ್ನಡೆಯಾಗುವುದು ಬಹುತೇಕ ಖಚಿತವಾಗಿದೆ.
ಈಗಾಗಲೇ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಬಹುತೇಕ ಸ್ಥಳೀಯ ಮುಖಂಡರು ಪಕ್ಷ ತೊರೆದಿದ್ದಾರೆ. ಇನ್ನೂ ಕೆಲವರು ಶಾರದ ಅಪ್ಪಾಜಿಯನ್ನು ಈಗಾಗಲೇ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರೂ ಸಹ ಸ್ವಯಂ ಘೋಷಿತ ಅಭ್ಯರ್ಥಿಗಳಾಗಿ ಗುರುತಿಸಿಕೊಳ್ಳಲು ತೆರೆಮರೆಯಲ್ಲಿ ಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದರಿಂದಾಗಿ ಶಾರದ ಅಪ್ಪಾಜಿಗೆ ಹಿನ್ನಡೆಯಾಗಲಿದೆ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ.
ಅಪ್ಪಾಜಿ ಅಭಿಮಾನಿಗಳು, ಕಾರ್ಯಕರ್ತರಲ್ಲಿ ಅಸಮಾಧಾನ:
ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಅವರೊಂದಿಗೆ ಬಹಳವರ್ಷಗಳ ಒಡನಾಟ ಹೊಂದಿದ್ದ ಹಾಗು ಆ ಮೂಲಕ ರಾಜಕೀಯದಲ್ಲಿ ನೆಲೆ ಕಂಡುಕೊಂಡಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಹಾಗು ಬೆಂಬಲಿಗರು ಇತ್ತೀಚೆಗೆ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವುದು ಅಪ್ಪಾಜಿ ಅಭಿಮಾನಿಗಳು ಹಾಗು ಕಾರ್ಯಕರ್ತರಲ್ಲಿ ಅಸಮಾಧಾನವನ್ನುಂಟು ಮಾಡಿದೆ. ಈ ನಡುವೆ ಈ ಹಿಂದೆ ಅಪ್ಪಾಜಿ ಎದುರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿ ೩ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ ಸಿ.ಎಂ ಇಬ್ರಾಹಿಂ ಪಕ್ಷದ ರಾಜ್ಯಾಧ್ಯಕ್ಷರಾಗಿರುವುದು ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.
ಅಪ್ಪಾಜಿ ವರ್ಚಸ್ಸಿಗೆ ಧಕ್ಕೆ :
೩ ಬಾರಿ ಶಾಸಕರಾಗಿದ್ದ ಎಂ.ಜೆ ಅಪ್ಪಾಜಿಯವರು ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸನ್ನು, ಅಭಿಮಾನಿ ಹಾಗು ಕಾರ್ಯಕರ್ತರ ಬಳಗವನ್ನು ಹೊಂದಿದ್ದರು. ಸುಮಾರು ೪೦ ರಿಂದ ೫೦ ಸಾವಿರದಷ್ಟು ವರ್ಚಸ್ಸಿನ ಮತಗಳು ಅಪ್ಪಾಜಿ ಪರವಾಗಿದ್ದವು. ಇದೀಗ ಅಪ್ಪಾಜಿ ನಿಧನದಿಂದಾಗಿ ಈ ಮತಗಳ ಮೇಲೆ ಕಣ್ಣಿಟ್ಟಿರುವ ಶಾಸಕ ಬಿ.ಕೆ ಸಂಗಮೇಶ್ವರ್ ಅಪ್ಪಾಜಿಯೊಂದಿಗೆ ಗುರುತಿಸಿಕೊಂಡಿರುವ ಪ್ರಮುಖರನ್ನು ಸೆಳೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದು, ಅಪ್ಪಾಜಿಯವರ ಚುನಾವಣಾ ತಂತ್ರಗಾರಿಕೆ ಬೇಧಿಸಲು ಮುಂದಾಗಿರುವುದು ಗುಟ್ಟಾಗಿ ಉಳಿದಿಲ್ಲ. ಈಗಾಗಲೇ ಅಲ್ಪಸಂಖ್ಯಾತ ಸಮುದಾಯದ ಮುಖಂಡ ಫೀರ್ ಷರೀಫ್, ಛಲವಾದಿ ಸಮಾಜದ ಬದರಿನಾರಾಯಣ, ಶಿವರಾಜ್ ಹಾಗು ಶಿವಮಾದು ಸೇರಿದಂತೆ ಇನ್ನಿತರ ಪ್ರಮುಖರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಕಲ್ಪಿಸಿಕೊಡಲಾಗಿದೆ. ಈ ನಡುವೆ ಅಪ್ಪಾಜಿ ವರ್ಚಸ್ಸಿಗೆ ಧಕ್ಕೆ ತರುವ ಹುನ್ನಾರಗಳು ಸಹ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಸಿ.ಎಂ ಇಬ್ರಾಹಿಂ ಹಿಂದೆ ದುಂಬಾಲು ಬಿದ್ದ ನಾಯಕರು:
ಕಳೆದ ವರ್ಷ ಅಪ್ಪಾಜಿಯವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮುಂಬರುವ ವಿಧಾನಸಭಾ ಚುನಾವಣೆಗೆ ಶಾರದ ಅಪ್ಪಾಜಿಯನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ. ಆದರೂ ಸಹ ಪಕ್ಷದಲ್ಲಿನ ಕೆಲ ನಾಯಕರು ಮುಂದಿನ ಚುನಾವಣೆಗೆ ತೆರೆಮರೆಯಲ್ಲಿ ಆಕಾಂಕ್ಷಿಗಳಾಗಿರುವುದು ತಿಳಿದು ಬರುತ್ತಿದ್ದು, ಕಳೆದ ಸುಮಾರು ೧ ವರ್ಷದಿಂದ ಸಿ.ಎಂ ಇಬ್ರಾಹಿಂ ಹಿಂದೆ ದುಂಬಾಲು ಬಿದ್ದು ತಿರುಗುತ್ತಿದ್ದಾರೆ. ಇದರಿಂದಾಗಿ ಒಂದೆಡೆ ಶಾರದ ಅಪ್ಪಾಜಿಗೆ ಇರಿಸುಮುರಿಸು ಉಂಟಾಗುತ್ತಿದೆ. ಮತ್ತೊಂದೆಡೆ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡುತ್ತಿದೆ.
ಬಿಜೆಪಿ ಪಕ್ಷಕ್ಕೆ ಶಾರದ ಅಪ್ಪಾಜಿ ಸೆಳೆಯಲು ತೆರೆಮರೆಯಲ್ಲಿ ಕಸರತ್ತು :
ಕ್ಷೇತ್ರದಲ್ಲಿ ಅಪ್ಪಾಜಿಯವರ ವರ್ಚಸ್ಸಿನ ಮತಗಳ ಮೇಲೆ ಬಿಜೆಪಿ ಸಹ ಕಣ್ಣಿಟ್ಟಿದ್ದು, ಮುಂಬರುವ ಚುನಾವಣೆಗೆ ಶಾರದ ಅಪ್ಪಾಜಿಯನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಲು ಪಕ್ಷದ ಸ್ಥಳೀಯ ಮುಖಂಡರ ಮೂಲಕ ಸೆಳೆಯಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವ ವಿಚಾರ ಸಹ ಗುಟ್ಟಾಗಿ ಉಳಿದಿಲ್ಲ. ಈಗಾಗಲೇ ಈ ಸಂಬಂಧ ಪ್ರಾಥಮಿಕ ಹಂತದ ಮಾತುಕತೆಗಳು ನಡೆದಿವೆ ಎನ್ನಲಾಗಿದೆ. ಈ ನಡುವೆ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರತಿ ಬಾರಿ ಹೊರಗಿನವರನ್ನು ಅಭ್ಯರ್ಥಿಯನ್ನಾಗಿ ಮಾಡುತ್ತಿದ್ದು, ಪಕ್ಷದ ನಿಷ್ಠಾವಂತ ಮುಖಂಡರು, ಕಾರ್ಯಕರ್ತರನ್ನು ಕಡೆಗಣಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
No comments:
Post a Comment