Monday, August 30, 2021

ನಗರಸಭೆ ವಾರ್ಡ್ ನಂ.೨೯ರ ಚುನಾವಣೆ : ೩ ಪಕ್ಷಗಳಿಂದ ಪ್ರಚಾರದ ಭರಾಟೆ

ಪಕ್ಷಗಳಿಗೆ ಗೆಲ್ಲುವ ಪ್ರತಿಷ್ಠೆ, ಉಳಿಸಿಕೊಳ್ಳುವ ತವಕ, ಅದೃಷ್ಟ ಪರೀಕ್ಷೆ


ಭದ್ರಾವತಿ ನಗರಸಭೆ ವಾಡ್ ನಂ.೨೯ರ ಚುನಾವಣೆ ಹಿನ್ನಲೆಯಲ್ಲಿ ಮತದಾರರನ್ನು ಸೆಳೆಯಲು ಮನೆ ಮನೆಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ ಎಂದು ಆರೋಪಿಸಿ ೩ ಪಕ್ಷಗಳ ನಡುವೆ ಸೋಮವಾರ ಸಂಜೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು.
    ಭದ್ರಾವತಿ, ಆ. ೩೦; ನಗರಸಭೆ ವಾರ್ಡ್ ನಂ.೨೯ರ ಚುನಾವಣೆ ಪ್ರಚಾರದ ಭರಾಟೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ೩ ಪಕ್ಷಗಳು ತೀವ್ರ ಪೈಪೋಟಿಗೆ ಮುಂದಾಗಿವೆ.
    ಸೆ.೩ರಂದು ಮತದಾನ ನಡೆಯಲಿದ್ದು, ಉಳಿದಿರುವ ೨ ದಿನಗಳಲ್ಲಿ ವ್ಯಾಪಕ ಪ್ರಚಾರಕ್ಕೆ ೩ ಪಕ್ಷಗಳು ಸಿದ್ದತೆಗಳನ್ನು ಕೈಗೊಂಡಿವೆ. ಈಗಾಗಲೇ ವಾರ್ಡ್ ವ್ಯಾಪ್ತಿಯಲ್ಲಿ ೩-೪ ಸುತ್ತಿನ ಪ್ರಚಾರ ನಡೆಸಲಾಗಿದೆ.
    ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಗೆಲ್ಲುವುದು ಪ್ರತಿಷ್ಠೆಯಾಗಿದ್ದರೇ, ಜೆಡಿಎಸ್ ಪಕ್ಷಕ್ಕೆ ಉಳಿಸಿಕೊಳ್ಳುವ ತವಕ, ಈ ನಡುವೆ ಬಿಜೆಪಿ ಅದೃಷ್ಟ ಪರೀಕ್ಷೆಗೆ ಎದುರು ನೋಡುತ್ತಿದೆ. ೩ ಪಕ್ಷಗಳ ಅಭ್ಯರ್ಥಿಗಳು ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಕಾರಣ ಚುನಾವಣೆ ಮತ್ತಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
    ಇವೆಲ್ಲದರ ನಡುವೆ ಚುನಾವಣಾ ಅಕ್ರಮಗಳು ಸಹ ಹೆಚ್ಚಾಗುತ್ತಿದ್ದು, ಮತದಾರರನ್ನು ಸೆಳೆಯಲು ನಾನಾ ರೀತಿಯ ಅಕ್ರಮಗಳನ್ನು ನಡೆಸಲಾಗುತ್ತಿದೆ ಎಂಬ ದೂರುಗಳು ಸ್ಥಳೀಯರಿಂದ ಕೇಳಿ ಬರುತ್ತಿವೆ. ಅಕ್ರಮಗಳ ವಿಚಾರಕ್ಕೆ ಸಂಬಂಧಿಸಿದಂತೆ ೩ ಪಕ್ಷಗಳು ಪರಸ್ಪರ ದೋಷಾರೋಪಣೆಗಳನ್ನು ಮಾಡುತ್ತಿವೆ. ಅಲ್ಲದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ೩ ಪಕ್ಷಗಳ ಮುಖಂಡರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮಾಹಿತಿ ಅರಿತು ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು.

No comments:

Post a Comment