ಕುವೆಂಪು ವಿ.ವಿ ವಿರುದ್ಧ ವಿದ್ಯಾರ್ಥಿ ಪರಿಷತ್ ಹೋರಾಟದ ಎಚ್ಚರಿಕೆ
ಕುವೆಂಪು ವಿವಿ
ಭದ್ರಾವತಿ, ಜ. ೨೬: ಕುವೆಂಪು ವಿಶ್ವವಿದ್ಯಾನಿಲಯದಲ್ಲಿ 'ಶಿಕ್ಷಣ ನಿಖಾಯ ಹುದ್ದೆ'(ಡೀನ್) ತೆರವುಗೊಂಡಿದ್ದರೂ ಸಹ ಇದುವರೆಗೂ ಈ ಹುದ್ದೆಯನ್ನು ಭರ್ತಿ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
೨ ವರ್ಷಗಳ ಅವಧಿಗೆ ಸೀಮಿತವಾದ ಹುದ್ದೆಗೆ ಜೇಷ್ಠತೆ ಆಧಾರದ ಮೇಲೆ ಅರ್ಹತೆ ಹೊಂದಿದ್ದವರು ಇದ್ದರೂ ಸಹ ಈ ಹುದ್ದೆಯನ್ನು ಭರ್ತಿ ಮಾಡದೆ ಮೀನಾಮೇಷ ಮಾಡಲಾಗುತ್ತಿದೆ. ಹುದ್ದೆಯನ್ನು ಭರ್ತಿಗೊಳಿಸದಿರುವುದಕ್ಕೆ ನಿಖರವಾದ ಮಾಹಿತಿಯನ್ನು ಸಂಬಂಧಪಟ್ಟವರು ಸ್ಪಷ್ಟಪಡಿಸಿಲ್ಲ. ಇದರಿಂದಾಗಿ ಒಂದೆಡೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಈಗಾಗಲೇ ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿರುವ ವಿಶ್ವವಿದ್ಯಾನಿಲಯ ಇದೀಗ ಮತ್ತೊಂದು ಆರೋಪಕ್ಕೆ ಗುರಿಯಾಗುವ ಲಕ್ಷಣಗಳು ಕಂಡು ಬರುತ್ತಿವೆ. 'ಶಿಕ್ಷಣ ನಿಖಾಯ ಹುದ್ದೆ'(ಡೀನ್)ಗೆ ಸಂಬಂಧಿಸಿದಂತೆ ಅರ್ಹರಿಗೆ ಅನ್ಯಾಯ ಮಾಡಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿವೆ.
'ಶಿಕ್ಷಣ ನಿಖಾಯ ಹುದ್ದೆ'(ಡೀನ್)ಗೆ ವಿಶ್ವವಿದ್ಯಾನಿಲಯದ ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಜಗನ್ನಾಥ ಕೆ. ಡಾಂಗೆ ಅವರು ಜೇಷ್ಠತೆ ಆಧಾರದ ಮೇಲೆ ಅರ್ಹತೆ ಹೊಂದಿದ್ದಾರೆ. ನಿಯಮಾನುಸಾರ ಕುಲಸಚಿವರು ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಕಾಯ್ದೆ ಪ್ರಕಾರ ೨ ವರ್ಷಗಳಿಗೆ ನಾಮನಿರ್ದೇಶನಗೊಳಿಸಿ ಆದೇಶ ಹೊರಡಿಸಬೇಕಾಗಿದೆ. ವಿವೇಚನೆ ಮೇರೆಗೆ ಅಥವಾ ಬೇರೆ ಯಾವುದೇ ರೀತಿಯಲ್ಲಿ ಈ ಹುದ್ದೆಯನ್ನು ಭರ್ತಿ ಮಾಡುವ ಅಧಿಕಾರ ಕುಲಸಚಿವರು ಹೊಂದಿಲ್ಲ ಎನ್ನಲಾಗಿದೆ. ಈ ನಡುವೆ ಡಾ. ಜಗನ್ನಾಥ ಕೆ. ಡಾಂಗೆ ಅವರು ಸುಮಾರು ೨ ತಿಂಗಳ ಹಿಂದೆಯೇ ತೆರವಾಗಿರುವ ಹುದ್ದೆಯನ್ನು ಭರ್ತಿಗೊಳಿಸುವಂತೆ ಕುಲಸಚಿವರಿಗೆ ಅರ್ಜಿ ಸಲ್ಲಿಸಿದ್ದಾರೆ.
ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಎಸ್.ಸಿ/ಎಸ್.ಟಿ ಅಭಿವೃದ್ಧಿ ಒಕ್ಕೂಟ ಸಹ ರಾಜ್ಯಪಾಲರಿಗೆ ಹಾಗು ಉನ್ನತ ಶಿಕ್ಷಣ ಸಚಿವರಿಗೆ ಸಹ ದೂರು ಸಲ್ಲಿಸಿದೆ.
ಈ ನಡುವೆ ದಲಿತ ವಿದ್ಯಾರ್ಥಿ ಪರಿಷತ್ ಡಾ. ಜಗನ್ನಾಥ ಕೆ. ಡಾಂಗೆ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದು, 'ಶಿಕ್ಷಣ ನಿಖಾಯ ಹುದ್ದೆ'(ಡೀನ್)ಗೆ ಹುದ್ದೆಯನ್ನು ತಕ್ಷಣ ಭರ್ತಿಗೊಳಿಸಬೇಕು. ಜೇಷ್ಠತೆ ಹಾಗು ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಕಾಯ್ದೆ ಪ್ರಕಾರ ಡಾ. ಜಗನ್ನಾಥ ಕೆ. ಡಾಂಗೆ ಅವರನ್ನು ಕುಲಸಚಿವರು ೨ ವರ್ಷಗಳ ಅವಧಿಗೆ ನಾಮನಿರ್ದೇಶನಗೊಳಿಸಬೇಕು. ಇಲ್ಲವಾದಲ್ಲಿ ದಲಿತ ಸಂಘಟನೆಗಳು ಜಿಲ್ಲೆ ಹಾಗು ರಾಜ್ಯಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಂದು ಪರಿಷತ್ ಜಿಲ್ಲಾಧ್ಯಕ್ಷ ಸಿ. ಪ್ರಭಾಕರ್ ಪತ್ರಿಕಾ ಹೇಳಿಕೆಯನ್ನು ನೀಡಿದ್ದಾರೆ.
No comments:
Post a Comment