Thursday, June 11, 2020

ಉಕ್ಕಿನ ನಗರದ ಹೃದಯ ಭಾಗಕ್ಕೂ ವಕ್ಕರಿಸಿದ ಕೊರೋನಾ

ರಂಗಪ್ಪ ವೃತ್ತದಿಂದ ಹೊಳೆಹೊನ್ನೂರು ವೃತ್ತದವರೆಗೆ ಸೀಲ್ ಡೌನ್ 

ಭದ್ರಾವತಿಯಲ್ಲಿ ಗುರುವಾರ ಬೆಂಗಳೂರಿನ ಬಂದಿದ್ದ ಮಹಿಳೆಯೊಬ್ಬರಲ್ಲಿ ಕೊರೋನಾ ಪತ್ತೆಯಾದ ಹಿನ್ನಲೆಯಲ್ಲಿ ರಂಗಪ್ಪ ವೃತ್ತದಿಂದ ಹೊಳೆಹೊನ್ನೂರು ವೃತ್ತದ ವರೆಗೆ ಸೀಲ್ ಡೌನ್ ಜಾರಿಗೊಳಿಸಲಾಗಿದೆ. 
ಭದ್ರಾವತಿ, ಜೂ. ೧೧: ಜನದಟ್ಟಣೆ ಅಧಿಕವಿರುವ ನಗರದ ಹೃದಯ ಭಾಗದಲ್ಲಿ ಗುರುವಾರ ಮಹಿಳೆಯೊಬ್ಬರಲ್ಲಿ ಕೊರೋನಾ ವೈರಸ್ ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಮಹಿಳೆ ವಾಸವಿದ್ದ ವ್ಯಾಪ್ತಿಯ ೧೦೦ ಮೀಟರ್ ವರೆಗೆ ಸೀಲ್ ಡೌನ್ ಜಾರಿಗೊಳಿಸಲಾಗಿದೆ. 
ನಗರದ ಚನ್ನಗಿರಿ ರಸ್ತೆಯ ಸತ್ಯ ಚಿತ್ರ ಮಂದಿರದ ಬಳಿ ಕುಟುಂಬ ವಾಸವಿದ್ದು, ಕಳೆದ ೪ ದಿನಗಳ ಹಿಂದೆ ಬೆಂಗಳೂರಿನಿಂದ ಬಂದಿದ್ದ ಮಹಿಳೆಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಪ್ರಯೋಗಾಲಯದಿಂದ ವರದಿ ಬಂದ ತಕ್ಷಣ ರಂಗಪ್ಪ ವೃತ್ತದಿಂದ ಹೊಳೆಹೊನ್ನೂರು ವೃತ್ತದ ವರೆಗೆ ಸೀಲ್ ಡೌನ್ ಜಾರಿಗೊಳಿಸಲಾಗಿದೆ. 
ರಸ್ತೆಯ ಎರಡು ಬದಿಯಲ್ಲೂ ಪೊಲೀಸರು ಬ್ಯಾರಿಗೇಡ್ ಅಳವಡಿಸಿದ್ದು, ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ಶಿವಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ,  ನಗರಸಭೆ ಪೌರಾಯುಕ್ತ ಮನೋಹರ್, ಪೊಲೀಸ್ ಉಪಾಧೀಕ್ಷಕ ಸುಧಾಕರ ನಾಯ್ಕ್ ಸೇರಿದಂತೆ ಇನ್ನಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹಿಳೆ ವಾಸವಿದ್ದ ಸ್ಥಳದ ಸುತ್ತಮುತ್ತ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಕೈಗೊಂಡಿದ್ದು, ಸ್ಯಾನಿಟೈಸರ್ ಮಾಡಿಸಲಾಗಿದೆ. 
ಭದ್ರಾವತಿಯಲ್ಲಿ ಗುರುವಾರ ಬೆಂಗಳೂರಿನ ಬಂದಿದ್ದ ಮಹಿಳೆಯೊಬ್ಬರಲ್ಲಿ ಕೊರೋನಾ ಪತ್ತೆಯಾದ ಹಿನ್ನಲೆಯಲ್ಲಿ ಮಹಿಳೆ ವಾಸವಿದ್ದ ಸ್ಥಳದ ಸುತ್ತಮುತ್ತ ಪೌರಕಾರ್ಮಿಕರು ಸ್ವಚ್ಛತಾ ಕೈಗೊಂಡು ಸ್ಯಾನಿಟೈಸರ್ ಮಾಡಿದರು. 
ಜನದಟ್ಟಣೆ ಪ್ರದೇಶ : 
ಮಹಿಳೆ ವಾಸವಿದ್ದ ಸ್ಥಳ ಪ್ರಮುಖ ವಾಣಿಜ್ಯ ರಸ್ತೆಯಾಗಿದ್ದು, ಚಿತ್ರಮಂದಿರ, ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ), ಉಪನೊಂದಾಣಿಕಾರಿಗಳ ಕಛೇರಿ, ಡಿ. ದೇವರಾಜ ಅರಸು ಹಿಂದುಳಿದ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳ ಕಛೇರಿ, ಕ್ಲಿನಿಕ್, ಹೋಟೆಲ್ ಸೇರಿದಂತೆ ಅಂಗಡಿಮುಂಗಟ್ಟುಗಳಿದ್ದು, ಸದಾ ಜನದಟ್ಟಣೆಯಿಂದ ಕೂಡಿದೆ. ಈ ಹಿನ್ನಲೆಯಲ್ಲಿ ಈ ಭಾಗದ ನಿವಾಸಿಗಳಲ್ಲಿ ಹೆಚ್ಚಿನ ಆತಂಕ ಮನೆ ಮಾಡಿದೆ. 
ತಹಸೀಲ್ದಾರ್ ಶಿವಕುಮಾರ್ ಪತ್ರಿಕೆಯೊಂದಿಗೆ ಮಾತನಾಡಿ, ಮಹಿಳೆ ಸೋಮವಾರ ಬೆಂಗಳೂರಿನಿಂದ ಬಂದಿದ್ದು, ಬಂದ ತಕ್ಷಣ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು. ಇದೀಗ ವರದಿ ಬಂದಿದ್ದು, ಕೊರೋನಾ ವೈರಸ್ ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಮಹಿಳೆಯನ್ನು ಶಿವಮೊಗ್ಗ ಮೆಗ್ಗಾನ್ ಕೋವಿಡ್-೧೯ ಆಸ್ಪತ್ರೆಗೆ ದಾಖಲಿಸಲಾಗಿದೆ. ತಕ್ಷಣದಿಂದ ಜಾರಿ ಬರುವಂತೆ ಸೀಲ್‌ಡೌನ್ ಮಾಡಲಾಗಿದೆ. ಮಹಿಳೆ ಜೊತೆಯಲ್ಲಿ ವಾಸವಿದ್ದ ತಂದೆ-ತಾಯಿ ಇಬ್ಬರನ್ನು ಬೇರಡೆ ಪತ್ಯೇಕವಾಗಿ ಇರಿಸಲಾಗಿದೆ ಎಂದರು. 
ಪೌರಾಯುಕ್ತ ಮನೋಹರ್ ಮಾತನಾಡಿ, ಮಹಿಳೆಯೊಬ್ಬರಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಯಾವುದೇ ಕಾರಣಕ್ಕೂ ಸಾರ್ವಜನಿಕರು ಆತಂಕಪಡಬಾರದು. ನಗರಸಭೆ ವತಿಯಿಂದ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಇನ್ನೂ ಹೆಚ್ಚಿನ ಎಚ್ಚರವಹಿಸಬೇಕೆಂದು ಮನವಿ ಮಾಡಿದರು. 

No comments:

Post a Comment