ಭದ್ರಾವತಿ ನ್ಯೂಟೌನ್ ತಾಲೂಕು ಛಲವಾದಿಗಳ(ಪ.ಜಾ) ಸಮಾಜದಲ್ಲಿ ಕಡು ಬಡವರಿಗೆ ಶನಿವಾರ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ದಿನಸಿ ಸಾಮಗ್ರಿ ವಿತರಿಸಿದರು.
ಭದ್ರಾವತಿ: ಕೊರೋನಾ ವೈರಸ್ ಹಿನ್ನಲೆಯಲ್ಲಿ ದೇಶಾದ್ಯಂತ ಶ್ರೀಸಾಮಾನ್ಯರು ಸೇರಿದಂತೆ ಎಲ್ಲರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಂದಿಗ್ದ ಪರಿಸ್ಥಿತಿಯಲ್ಲಿ ಉಳ್ಳವರು ತಮ್ಮ ಕೈಲಾದಷ್ಟು ನೆರವು ನೀಡಲು ಮುಂದಾಗಬೇಕೆಂದು ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಮನವಿ ಮಾಡಿದರು.ಅವರು ಶನಿವಾರ ನ್ಯೂಟೌನ್ ತಾಲೂಕು ಛಲವಾದಿಗಳ(ಪ.ಜಾ) ಸಮಾಜದಲ್ಲಿ ಕಡು ಬಡವರಿಗೆ ದಿನಸಿ ಸಾಮಗ್ರಿ ವಿತರಿಸಿ ಮಾತನಾಡಿದರು.
ಎಲ್ಲವನ್ನು ಸರ್ಕಾರ ಮಾಡಲು ಸಾಧ್ಯವಿಲ್ಲ. ತಮ್ಮ ಸುತ್ತಮುತ್ತಲ ಪರಿಸರದಲ್ಲಿ ತಮ್ಮೊಂದಿಗೆ ಬದುಕುತ್ತಿರುವ ಸಾಕಷ್ಟು ಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇವರ ನೆರವಿಗೆ ಮುಂದಾಗುವುದು ಉಳ್ಳವರ ಕರ್ತವ್ಯವಾಗಿದೆ. ಕೈಲಾದಷ್ಟು ನೆರವು ನೀಡುವ ಮೂಲಕ ಸಂದಿಗ್ದ ಪರಿಸ್ಥಿತಿಯನ್ನು ಎದುರಿಸಲು ಮುಂದಾಗಬೇಕೆಂದರು.
ಪ್ರಸ್ತುತ ರಾಜ್ಯದಲ್ಲಿ ತುರ್ತಾಗಿ ಮದ್ಯದಂಗಡಿಗಳನ್ನು ತೆರೆಯುವ ಅಗತ್ಯವಿರಲಿಲ್ಲ. ಸುಮಾರು ೪೦ ದಿನಗಳಿಂದ ಮದ್ಯವಿಲ್ಲದೆ ಜನರು ಬದುಕಿದ್ದರು. ಮುಂದೆ ಸಹ ಮದ್ಯವಿಲ್ಲದೆ ಬದುಕುತ್ತಿದ್ದರು. ರಾಜ್ಯ ಸರ್ಕಾರ ಹಣದ ಆಸೆಗಾಗಿ ಜನರ ಬದುಕನ್ನು ಬಲಿ ಕೊಡಲು ಮುಂದಾಗಿದೆ ಎಂದು ಆರೋಪಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ಮುಖಂಡರಾದ ಡಿ. ನರಸಿಂಹಮೂರ್ತಿ, ಎಸ್.ಎಸ್ ಭೈರಪ್ಪ, ಬದರಿನಾರಾಯಣ, ಎಚ್.ಎಂ ಮಹಾದೇವಯ್ಯ, ಎ. ತಿಪ್ಪೇಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಛಲವಾದಿ ಸಮಾಜದ ಅಧ್ಯಕ್ಷ ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಲೋಕೇಶ್(ಕೆಇಬಿ) ವಂದಿಸಿದರು.
No comments:
Post a Comment