Tuesday, February 22, 2022

ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ, ಸಾಧಿಸುವ ಛಲ, ಮುಂದೆ ಬರಬೇಕೆಂಬ ಮನೋಭಾವ ಮುಖ್ಯ : ಸುರಜಿತ್ ಮಿಶ್ರಾ

ಭಾರತೀಯ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಸಿಎಸ್‌ಆರ್ ಅಡಿಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕೆಗೆ ಅಗತ್ಯವಿರುವ ಕಲಿಕಾ ಸಾಮಾಗ್ರಿಗಳನ್ನು  ವಿತರಿಸಲಾಯಿತು.
    ಭದ್ರಾವತಿ, ಫೆ. ೨೨: ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ, ಜೀವನದಲ್ಲಿ ಮುಂದೆ ಬರಬೇಕೆಂಬ ಮನೋಭಾವ ಮತ್ತು ಸಾಧಿಸುವ ಛಲ ಮುಖ್ಯವಾಗಿದೆ ಎಂದು ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರಾ ಹೇಳಿದರು.
    ಅವರು ಕಾರ್ಖಾನೆ ವತಿಯಿಂದ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ (ಸಿಎಸ್‌ಆರ್) ಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕೆಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದರು.
    ಸರ್ಕಾರಿ ಶಾಲೆಗಳಲ್ಲಿ ಓದಿರುವ ಬಹಳಷ್ಟು ವಿದ್ಯಾರ್ಥಿಗಳು ಜೀವನದಲ್ಲಿ ಮುಂದೆ ಬಂದಿದ್ದು, ಪ್ರಪಂಚದಾದ್ಯಂತ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಶಾಲೆಗಳಿಗೆ ಮೂಲ ಸೌಕರ್ಯಗಳಿಗಿಂತ ಕಲಿಕೆಯ ಆಸಕ್ತಿ, ಜೀವನದಲ್ಲಿ ಮುಂದೆ ಬರಬೇಕೆಂಬ ಮನೋಭಾವ ಮತ್ತು ಸಾಧಿಸುವ ಛಲ ಮುಖ್ಯವಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ನಡುವೆ ಸೈಲ್-ವಿಐಎಸ್‌ಎಲ್ ಸಾಮಾಜಿಕವಾಗಿ ಪ್ರಜ್ಞೆಯುಳ್ಳ ಕಾರ್ಪೊರೇಟ್ ಸಂಸ್ಥೆಯಾಗಿ ಸಾಮಾಜಿಕ ಅಭಿವೃದ್ದಿಗೆ ತನ್ನ ಸಾಮಾಜಿಕ ಬದ್ಧತೆಯನ್ನು ಪೂರೈಸಲು ಶ್ರಮಿಸುತ್ತಿದೆ ಎಂದರು.
    ಹುತ್ತಾಕಾಲೋನಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಜಿ.ಸಿ ಗೀತಾಂಜಲಿ ಮಾತನಾಡಿ, ಶಿಕ್ಷಣದಲ್ಲಿ ಬಡತನವಿಲ್ಲ. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಕಲಿತು ಮುಂದೆ ಬರಬೇಕೆಂಬ ತುಡಿತದಿಂದ ಶ್ರೀಮಂತರಾಗಬೇಕು. ಕಾರ್ಖಾನೆ ವತಿಯಿಂದ ನೀಡಲಾಗಿರುವ ಕಲಿಕಾ ಸಾಮಾಗ್ರಿಗಳನ್ನು ತಮ್ಮ ಜ್ಞಾನ ಮತ್ತು ಶೈಕ್ಷಣಿಕ ಅಡಿಪಾಯ ಹೆಚ್ಚಿಸಿಕೊಳ್ಳಲು ಸದುಪಯೋಗಪಡಿಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಸಹ ತಾವು ಆಯ್ಕೆ ಮಾಡಿಕೊಂಡಿರುವ ಯಾವುದೇ ಕ್ಷೇತ್ರದಲ್ಲಿ ಉನ್ನತ ಸ್ಥಾನ ಪಡೆದು ಸರ್.ಎಂ. ವಿಶ್ವೇಶ್ವರಯ್ಯ, ಡಾ. ಬಿ.ಆರ್. ಅಂಬೇಡ್ಕರ್, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸೇರಿದಂತೆ ಮಹಾನ್ ನಾಯಕರ ಆದರ್ಶ ಗುಣಗಳನ್ನು ಅಳವಡಿಸಿಕೊಂಡು ಭ್ರಷ್ಟಾಚಾರ ಮುಕ್ತರಾಗಿ ದೇಶದ ಜವಾಬ್ದಾರಿಯುತ ನಾಗರೀಕರಾಗಿ ಬೆಳೆಯಬೇಕೆಂದು ಆಶಿಸಿದರು.
    ಕಾರ್ಖಾನೆಯ ಸಹಾಯಕ ಪ್ರಬಂಧಕಿ (ಸಿಬ್ಬಂದಿ) ಕೆ.ಎಸ್. ಶೋಭಾ ಮಾತನಾಡಿ, ಸಿಎಸ್‌ಆರ್ ಅಡಿಯಲ್ಲಿ ಕೈಗೊಂಡಿರುವ ವಿವಿಧ ಚಟುವಟಿಕೆಗಳು ಮತ್ತು ಪ್ರಸಕ್ತ ಸಾಲಿನಲ್ಲಿ ಶಿಕ್ಷಣ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರಗಳಿಗೆ ಒತ್ತು ನೀಡಲಾಗಿರುವ ಚಟುವಟಿಕೆಗಳ ಕುರಿತು ಸಂಕ್ಷಿಪ್ತವಾಗಿ ತಿಳಿಸಿದರು.
    ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಕಾರ್ಖಾನೆವತಿಯಿಂದ ಸಿಎಸ್‌ಆರ್ ಅಡಿಯಲ್ಲಿ ನಗರದ ಎರಡು ಸರ್ಕಾರಿ ಶಾಲೆಗಳಿಗೆ ಗ್ಲೋಬ್ಸ್, ರೋಲಿಂಗ್ ಬ್ಲ್ಯಾಕ್ ಬೋರ್ಡ್‌ಗಳು ಮತ್ತು ೧೦೯ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‌ಗಳು, ಬರವಣೆಗೆ ನೋಟ್ ಪುಸ್ತಕಗಳು ಸೇರಿದಂತೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು.  
    ಕಾರ್ಖಾನೆ ವತಿಯಿಂದ ಸಿಎಸ್‌ಆರ್ ಅಡಿಯಲ್ಲಿ ವಿವಿಧ ಸಾಮಾಜಿಕ ಅಭಿವೃದ್ಧಿ ಚಟುವಟಿಕೆಗಳನ್ನು ನಗರ ಹಾಗು ಗ್ರಾಮಾಂತರ ಭಾಗಗಳಲ್ಲಿ ಕೈಗೊಳ್ಳಲಾಗುತ್ತಿದೆ. ಅದರಲ್ಲೂ ಗ್ರಾಮಾಂತರ ಭಾಗದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಗ್ರಾಮಗಳ ಅಭಿವೃದ್ಧಿ ಜೊತೆಗೆ ಶೈಕ್ಷಣಿಕ ಮೂಲಸೌಕರ್ಯಗಳನ್ನು ಸುಧಾರಿಸುವುದಕ್ಕೆ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬೆಂಬಲವನ್ನು ಒದಗಿಸುವುದಕ್ಕೆ ಒತ್ತು ನೀಡಲಾಗುತ್ತಿದೆ. ಅಲ್ಲದೆ  ಕ್ರೀಡಾ ಚಟುವಟಿಕೆಗಳು ಮತ್ತು ನಗರಾಡಳಿತ ವ್ಯಾಪ್ತಿಯಲ್ಲಿ ಮನರಂಜನಾ ಸೌಲಭ್ಯಗಳನ್ನು ಉತ್ತೇಜಿಸಲು ಕ್ರೀಡಾಂಗಣ, ಜಿಮ್ನಾಷಿಯಂ ಮತ್ತು ಉದ್ಯಾನವನಗಳಂತಹ ವಿವಿಧ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಹೆಚ್ಚಿನ ಗಮನ ನೀಡಲಾಗಿದೆ.  
     ಪ್ರಭಾರ ಮಹಾಪ್ರಬಂಧಕ(ಸಿಬ್ಬಂದಿ ಮತ್ತು ಆಡಳಿತ) ಪಿ.ಪಿ. ಚಕ್ರಬರ್ತಿ,  ಮಹಾಪ್ರಬಂಧಕ(ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್,  ಉಪ ಮಹಾಪ್ರಬಂಧಕಿ(ಸಿಬ್ಬಂದಿ) ವಿ. ಧನಲಕ್ಷ್ಮಿ, ಸಹಾಯಕ ಮಹಾಪ್ರಬಂಧಕ(ನಗರಾಡಳಿತ) ಉಮೇಶ್ ಮಧುಕರ್ ಉಕೆ ಮತ್ತು ಸಹಾಯಕ ಪ್ರಬಂಧಕ(ಹಣಕಾಸು) ಅಮುಲ್ ಸುರೇಖ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ದಿವ್ಯಶ್ರೀ, ದುರ್ಗಾಶ್ರೀ ಮತ್ತು ಆಶಾ ಸುಶ್ರಾವ್ಯ ಪ್ರಾರ್ಥಿಸಿದರು. ಸಹಾಯಕ ಶಿಕ್ಷಕಿಯರಾದ ಹೇಮಾಮಾಲಿನಿ ಸ್ವಾಗತಿಸಿ, ಎಸ್.ವೀಣಾ ವಂದಿಸಿ, ಎಂ. ಸುಮಾ ನಿರೂಪಿಸಿದರು.

No comments:

Post a Comment