* ಅನಂತಕುಮಾರ್
ಭದ್ರಾವತಿ, ಮೇ. ೨೭ : ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ಮೈಸೂರು ಕಾಗದ ಕಾರ್ಖಾನೆ ಸ್ಥಾಪನೆಯೊಂದಿಗೆ ಸುಮಾರು ೮ ದಶಕಗಳ ಹಿಂದೆಯೇ ವಿಶ್ವದ ಭೂಪಟದಲ್ಲಿ ಕೈಗಾರಿಕಾ ನಗರ ಎಂಬ ಹೆಗ್ಗಳಿಕೆಯಿಂದ ಗುರುತಿಸಿಕೊಂಡಿದ್ದ ಕ್ಷೇತ್ರಕ್ಕೆ ಇದುವರೆಗೂ ಮಂತ್ರಿ ಭಾಗ್ಯ ಒದಗಿ ಬಂದಿಲ್ಲ.
ರಾಜಕೀಯವಾಗಿ ಕ್ಷೇತ್ರವನ್ನು ಆರಂಭದಿಂದಲೂ ಕಡೆಗಣಿಸಿಕೊಂಡು ಬರಲಾಗುತ್ತಿದ್ದು, ಇದು ಇಂದಿಗೂ ಮುಂದುವರೆದಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಕ್ಷೇತ್ರ ಬೆಂಗಳೂರು ಮಹಾನಗರದಂತೆ ಬೆಳವಣಿಗೆ ಹೊಂದಬೇಕಾಗಿತ್ತು. ಆದರೆ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಜನಪ್ರತಿನಿಧಿಗಳಿಗೆ ರಾಜಕೀಯವಾಗಿ ಸೂಕ್ತ ಸ್ಥಾನಮಾನಗಳು ಲಭಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.
೧೯೫೭ರಲ್ಲಿ ಕಾಂಗ್ರೆಸ್ ಪಕ್ಷದಿಂದ ಡಿ.ಟಿ ಸೀತಾರಾಮರಾವ್, ೧೯೬೨ರಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿ.ಡಿ ದೇವೇಂದ್ರಪ್ಪ, ೧೯೬೭ರಲ್ಲಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ(ಪಿಎಸ್‌ಪಿ)ಯಿಂದ ಅಬ್ದುಲ್ ಖುದ್ದೂಸ್ ಅನ್ವರ್, ೧೯೭೨ರಲ್ಲಿ ಕಾಂಗ್ರೆಸ್ ಪಕ್ಷದಿಂದ ಅಬ್ದುಲ್ ಖುದ್ದೂಸ್ ಅನ್ವರ್, ೧೯೭೮ರಲ್ಲಿ ಕಾಂಗ್ರೆಸ್(ಐ) ಪಕ್ಷದಿಂದ ಜಿ. ರಾಜಶೇಖರ್, ೧೯೮೩ರಲ್ಲಿ ಜೆಎನ್‌ಪಿ ಪಕ್ಷದಿಂದ ಸಾಲೇರ ಎಸ್ ಸಿದ್ದಪ್ಪ, ೧೯೮೫ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸಾಲೇರ ಎಸ್ ಸಿದ್ದಪ್ಪ, ೧೯೮೯ರಲ್ಲಿ ಕಾಂಗ್ರೆಸ್ ಪಕ್ಷದಿಂದ ಇಸಾಮಿಯಾ, ೧೯೯೪ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಎಂ.ಜೆ ಅಪ್ಪಾಜಿ, ೧೯೯೯ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಎಂ.ಜೆ ಅಪ್ಪಾಜಿ, ೨೦೦೪ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಬಿ.ಕೆ ಸಂಗಮೇಶ್ವರ್, ೨೦೦೮ರಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿ.ಕೆ ಸಂಗಮೇಶ್ವರ್, ೨೦೧೩ರಲ್ಲಿ ಜೆಡಿಎಸ್ ಪಕ್ಷದಿಂದ ಎಂ.ಜೆ ಅಪ್ಪಾಜಿ, ೨೦೧೮ರಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿ.ಕೆ ಸಂಗಮೇಶ್ವರ್ ಮತ್ತು ೨೦೨೩ರಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿ.ಕೆ ಸಂಗಮೇಶ್ವರ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ ಅಬ್ದುಲ್ ಖುದ್ದೂಸ್ ಅನ್ವರ್ ಮತ್ತು ಸಾಲೇರ ಎಸ್ ಸಿದ್ದಪ್ಪ ತಲಾ ಎರಡು ಬಾರಿ, ಎಂ.ಜೆ ಅಪ್ಪಾಜಿ ೩ ಬಾರಿ ಹಾಗು ಬಿ.ಕೆ ಸಂಗಮೇಶ್ವರ್ ೪ ಬಾರಿ ಶಾಸಕರಾಗಿದ್ದಾರೆ. ಆದರೆ ಇದುವರೆಗೂ ಯಾರಿಗೂ ಮಂತ್ರಿಗಿರಿ ಸ್ಥಾನ ಲಭಿಸಿಲ್ಲ.
೪ ಬಾರಿ ಗೆದ್ದರೂ ಮಂತ್ರಿ ಭಾಗ್ಯ ಇಲ್ಲ :
ರಾಜ್ಯದ ರಾಜಕೀಯದ ಇತಿಹಾಸದಲ್ಲಿ ಒಂದು ಅಥವಾ ಎರಡು ಬಾರಿ ಗೆದ್ದವರೇ ಮುಖ್ಯಮಂತ್ರಿ, ಮಂತ್ರಿಯಾಗಿರುವುದು ಕಾಣಬಹುದಾಗಿದೆ. ಸಂಗಮೇಶ್ವರ್ ೪ ಬಾರಿ ಗೆದ್ದರೂ ಮಂತ್ರಿಯಾಗದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಸಂಗಮೇಶ್ವರ್ ಬಿಟ್ಟು ಕ್ಷೇತ್ರವನ್ನು ಪ್ರತಿನಿಧಿಸಿರುವ ಮಾಜಿ ಶಾಸಕರು ಯಾರು ಸಹ ಬದುಕಿಲ್ಲ. ಕಣ್ಮರೆಯಾಗಿ ಇತಿಹಾಸ ಪುಟಗಳಲ್ಲಿ ಸೇರ್ಪಡೆಗೊಂಡಿದ್ದಾರೆ. ಕ್ಷೇತ್ರದ ಜನರು ಈ ಬಾರಿ ಮಂತ್ರಿ ಸ್ಥಾನ ಲಭಿಸುವ ಕನಸು ಕಂಡಿದ್ದರು. ಆದರೆ ಇದೀಗ ಕನಸು ಕನಸಾಗಿಯೇ ಉಳಿದು ಬಿಟ್ಟಿದೆ.
ನಿಗಮ ಮಂಡಳಿಗೆ ಸೀಮಿತ :
ಕ್ಷೇತ್ರಕ್ಕೆ ಸಚಿವ ಸ್ಥಾನ ಲಭಿಸುವ ಬದಲು ನಿಗಮ ಮಂಡಳಿ ಸ್ಥಾನ ಲಭಿಸಿದ್ದು, ಅದರಲ್ಲೂ ವಿಶೇಷತೆ ಎಂದರೆ ಶಾಸಕರಾಗಿ ಆಯ್ಕೆಯಾಗದವರಿಗೆ ನಿಗಮ ಮಂಡಳಿ ಸ್ಥಾನ ಲಭಿಸಿದೆ. ಈ ಹಿಂದೆ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಬಿಜೆಪಿ ತಾಲೂಕು ಮಂಡಲ ಮಾಜಿ ಅಧ್ಯಕ್ಷೆ ಸಿ. ಮಂಜುಳ ಅವರನ್ನು ಮಹಿಳಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿತ್ತು. ನಂತರ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಬಲ್ಕೀಶ್ ಬಾನು ಅವರನ್ನು ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿತ್ತು. ೨೦೧೯ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ರವರನ್ನು ಕೆಆರ್‌ಐಡಿಎಲ್ ಅಧ್ಯಕ್ಷರಾಗಿ ನೇಮಕಗೊಳಿಸಲಾಗಿತ್ತು. ಸುಮಾರು ೭ ತಿಂಗಳು ಸಂಗಮೇಶ್ವರ್ ಅಧ್ಯಕ್ಷರಾಗಿದ್ದರು.
ಪಕ್ಷದಲ್ಲಿ ಉನ್ನತ ಸ್ಥಾನ :
ಮೂಲತಃ ಕ್ಷೇತ್ರದವರಾದ ಬಿ.ವಿ ಶ್ರೀನಿವಾಸ್ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಇದೆ ರೀತಿ ಮಹಮದ್ ನಲಪಾಡ್ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಪಕ್ಷದಲ್ಲಿ ಮಾತ್ರ ಉನ್ನತ ಸ್ಥಾನ ಲಭಿಸಿದ್ದು, ಆದರೆ ಸರ್ಕಾರದಲ್ಲಿ ಇದುವರೆಗೂ ಮಂತ್ರಿಗಿರಿ ಸ್ಥಾನ ಲಭಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಮಂತ್ರಿಗಿರಿ ಸ್ಥಾನ ಎಂಬುದು ಒಂದು ರೀತಿ ಶಾಪದ ಕಗ್ಗಂಟಿನಲ್ಲಿಯೇ ಸಿಲುಕಿಕೊಂಡಿದೆಯೇ ಎಂಬ ಭಾವನೆ ಇದೀಗ ಕ್ಷೇತ್ರದ ಜನತೆಯಲ್ಲಿ ಮೂಡಿದೆ.
No comments:
Post a Comment