ಸರ್ಕಾರಿ ಶಾಲೆ ಮುಖ್ಯ ಶಿಕ್ಷಕರೊಬ್ಬರಿಂದ ಪೋಷಕರಿಗೆ ಮನವಿ ವಿಡಿಯೋ ಬಿಡುಗಡೆ
ಭದ್ರಾವತಿ ತಾಲೂಕಿನ ಕಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವಿ. ಹಿರೇಮಠ್, ದ್ವಿಪಾತ್ರದ ಮೂಲಕ ಕೋವಿಡ್-೧೯ರ ಸಂದರ್ಭದಲ್ಲಿ ಮಕ್ಕಳ ಶಿಕ್ಷಣಕ್ಕೆ ಪೋಷಕರು ನೆರವಾಗುವಂತೆ ಕೋರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವ್ಯಾಪಕವಾಗಿ ಪ್ರಚಾರಗೊಳ್ಳುತ್ತಿದೆ.
ಭದ್ರಾವತಿ, ಏ. ೧೧: ಕೋವಿಡ್-೧೯ರ ಪರಿಣಾಮ ಕಳೆದ ಸುಮಾರು ೧೫ ತಿಂಗಳಿನಿಂದ ಮಕ್ಕಳ ಶಿಕ್ಷಣಕ್ಕೆ ಸಾಕಷ್ಟು ತೊಂದರೆಯಾಗುತ್ತಿದ್ದು, ಈ ನಡುವೆಯೂ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಹಲವು ರೀತಿಯಲ್ಲಿ ಕಲಿಕೆಯನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ಅಲ್ಲದೆ ಒಂದು ಹಂತದ ಶೈಕ್ಷಣಿಕ ಅವಧಿಯನ್ನೂ ಸಹ ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ. ಇದೀಗ ಕೋವಿಡ್-೧೯ರ ೨ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಸರ್ಕಾರ ಪುನಃ ಶಾಲಾ-ಕಾಲೇಜುಗಳನ್ನು ಸಂಪೂರ್ಣವಾಗಿ ಬಂದ್ ಮಾಡುವಂತೆ ಸೂಚಿಸಿದೆ.
ಶಾಲಾ-ಕಾಲೇಜುಗಳನ್ನು ಸಂಪೂರ್ಣವಾಗಿ ಬಂದ್ ಮಾಡಿರುವ ಹಿನ್ನಲೆಯಲ್ಲಿ ಉಂಟಾಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಂಗ ಕಲಾವಿದರಾಗಿರುವ ಮುಖ್ಯ ಶಿಕ್ಷಕರೊಬ್ಬರು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿನೂತನ ವಿಡಿಯೋ ಇದೀಗ ವ್ಯಾಪಕವಾಗಿ ಪ್ರಚಾರಗೊಳ್ಳುತ್ತಿದೆ.
ತಾಲೂಕಿನ ಕಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವಿ. ಹಿರೇಮಠ್, ದ್ವಿಪಾತ್ರದ ಮೂಲಕ ಕೋವಿಡ್-೧೯ರ ಸಂದರ್ಭದಲ್ಲಿ ಮಕ್ಕಳ ಶಿಕ್ಷಣಕ್ಕೆ ಪೋಷಕರು ನೆರವಾಗುವಂತೆ ಕೋರಿದ್ದಾರೆ. ಸರ್ಕಾರದ ಆದೇಶದಂತೆ ಮಕ್ಕಳು ಶಾಲೆಗಳಿಗೆ ಬರುವ ಆಗಿಲ್ಲ. ಈ ಹಿನ್ನಲೆಯಲ್ಲಿ ಮಕ್ಕಳು ಮನೆಯಲ್ಲಿಯೇ ಇದ್ದು ಕಲಿಕೆಯನ್ನು ಮುಂದುವರೆಸಿಕೊಂಡು ಹೋಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಪೋಷಕರದ್ದಾಗಿದ್ದು, ಮಕ್ಕಳಿಗೆ ಶಾಲೆಯ ಶಿಕ್ಷಕರು ನೀಡುವ ಹೋಮ್ ವರ್ಕ್ ಹಾಗು ಕಲಿಕೆಯ ವಿಧಾನಗಳನ್ನು ಪುಸ್ತಕಗಳಲ್ಲಿ ದಾಖಲಿಸಿ ಕೊಡಲಾಗುವುದು. ಹೋಮ್ ವರ್ಕ್ ಪುಸ್ತಕಗಳನ್ನು ಮಕ್ಕಳ ಬದಲಿಗೆ ಪೋಷಕರು ತಮ್ಮ ಬಿಡುವಿನ ಸಮಯದಲ್ಲಿ ಶಾಲಾ ಅವಧಿಯಲ್ಲಿ ಶಾಲೆಗೆ ಬಂದು ಪಡೆದುಕೊಂಡು ಹೋಗಬಹುದಾಗಿದೆ. ಈ ರೀತಿಯ ವಿಧಾನದಿಂದ ಮಕ್ಕಳಿಗೆ ಯಾವುದೇ ರೀತಿ ಸಮಸ್ಯೆ ಎದುರಾಗುವುದಿಲ್ಲ. ಈ ಹಿನ್ನಲೆಯಲ್ಲಿ ಪೋಷಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ದ್ವಿಪಾತ್ರದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಚಾರಗೊಳ್ಳುತ್ತಿದ್ದು, ವಿನೂತನ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂಬುದು ಪ್ರಜ್ಞಾವಂತ ನಾಗರೀಕರ ಆಶಯವಾಗಿದೆ.
No comments:
Post a Comment