ಭದ್ರಾವತಿ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಈ ಬಾರಿ ಪ್ರತಿಸ್ಥಾಪಿಸಲಾಗಿದ್ದ ವಿನಾಯಕ ಮೂರ್ತಿ ವಿಸರ್ಜನೆ ಶನಿವಾರ ಶಾಂತಿಯುತವಾಗಿ ಮುಕ್ತಾಯಗೊಂಡಿತು.
ಭದ್ರಾವತಿ, ಸೆ. ೧೮: ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಈ ಬಾರಿ ಪ್ರತಿಸ್ಥಾಪಿಸಲಾಗಿದ್ದ ವಿನಾಯಕ ಮೂರ್ತಿ ವಿಸರ್ಜನೆ ಶನಿವಾರ ಶಾಂತಿಯುತವಾಗಿ ಮುಕ್ತಾಯಗೊಂಡಿತು.
ಕೋವಿಡ್-೧೯ರ ಹಿನ್ನಲೆಯಲ್ಲಿ ಈ ಬಾರಿ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಮೆರವಣಿಗೆ ನಿಷೇಧಿಸಿದ ಪರಿಣಾಮ ಸಂಜೆ ೬ ಗಂಟೆಗೆ ಮೂರ್ತಿಯನ್ನು ಪ್ರತಿಷ್ಠಾಪನಾ ಸ್ಥಳದಿಂದ ಮೆರವಣಿಗೆ ಮೂಲಕ ಹೊಸಮನೆ ರಸ್ತೆ, ರಂಗಪ್ಪ ವೃತ್ತ, ಸಿ.ಎನ್ ರಸ್ತೆ, ಮಾಧವಚಾರ್ ವೃತ್ತ ಮೂಲಕ ತರೀಕೆರೆ ರಸ್ತೆಯಲ್ಲಿ ಸಾಗಿ ಸಂಜೆ ೭ ಗಂಟೆಗೆ ನಗರಸಭೆ ಮುಂಭಾಗ ಭದ್ರಾ ನದಿಯಲ್ಲಿ ವಿಸರ್ಜಿಸಲಾಯಿತು.
ರಾಜಬೀದಿ ಉತ್ಸವ ಮೆರವಣಿಗೆ ರದ್ದು ಮಾಡಿದ್ದ ಹಿನ್ನಲೆಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಂಡಿರಲಿಲ್ಲ. ಆದರೂ ಸಹ ಮುನ್ನಚ್ಚರಿಕೆ ಕ್ರಮವಾಗಿ ಗೃಹ ರಕ್ಷಕ ದಳ, ಎಲ್ಲಾ ಠಾಣೆಗಳ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗಿತ್ತು. ಈ ನಡುವೆ ರಾಜ ಬೀದಿ ಉತ್ಸವ ಮೆರವಣಿಗೆ ರದ್ದು ಮಾಡಿದ್ದರೂ ಸಹ ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಸುತ್ತಮುತ್ತಲ ನಿವಾಸಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಈ ಬಾರಿ ಜಿಲ್ಲಾಡಳಿತ ಕೇವಲ ೫ ದಿನಗಳ ಕಾಲ ಪ್ರತಿಷ್ಠಾಪನೆಗೆ ಮಾತ್ರ ಅವಕಾಶ ನೀಡಿತ್ತು. ಆದರೆ ಹಿಂದೂಪರ ಸಂಘಟನೆಗಳ ಒತ್ತಡಕ್ಕೆ ಮಣಿದು ಕೊನೆಗೆ ೯ ದಿನಗಳ ಪ್ರತಿಷ್ಠಾಪನೆಗೆ ಸಮ್ಮತಿಸಿತ್ತು.
ಮೆರವಣಿಗೆ ನೇತೃತ್ವವನ್ನು ಸಮಿತಿ ಅಧ್ಯಕ್ಷ, ಹಿರಿಯ ಮುಖಂಡ ವಿ. ಕದಿರೇಶ್ ವಹಿಸಿದ್ದರು. ಸಮಿತಿ ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
No comments:
Post a Comment