Tuesday, May 24, 2022

ಶ್ರೀ ಶಿವಕುಮಾರ ಸ್ವಾಮೀಜಿ ಸೇವೆ, ತ್ಯಾಗಗಳ ಪ್ರತಿರೂಪ : ಸಿದ್ದಲಿಂಗ ಸ್ವಾಮೀಜಿ


    ಭದ್ರಾವತಿಯಲ್ಲಿ ಆಯೋಜಿಸಲಾಗಿದ್ದ ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ೧೧೫ನೇ ಜನ್ಮದಿನೋತ್ಸವ  ಸಮಾರಂಭವನ್ನು ಮಂಗಳವಾರ ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಿದರು.
    ಭದ್ರಾವತಿ, ಮೇ. ೨೪: ಶ್ರೀ ಶಿವಕುಮಾರ ಸ್ವಾಮೀಜಿಯವರು ಸೇವೆ ಮತ್ತು ತ್ಯಾಗಗಳ ಪ್ರತಿರೂಪವಾಗಿದ್ದು, ಇವರಿಗೆ ಯಾರನ್ನು ಸಹ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ತುಮಕೂರು ಶ್ರೀ ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
    ಹಳೇನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ತಾಲೂಕು ವೀರಶೈವ ಲಿಂಗಾಯತ ಸಮಾಜ ಹೆಸರಿನಲ್ಲಿ ಲಿಂಗಾಯತ ಸಮಾಜದ ಎಲ್ಲಾ ಸಂಘಟನೆಗಳು ಒಗ್ಗೂಡಿ ಹಮ್ಮಿಕೊಂಡಿದ್ದ ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ೧೧೫ನೇ ಜನ್ಮದಿನೋತ್ಸವ  ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
    ಶ್ರೀಗಳ ಸೇವೆ ಹಾಗು ತ್ಯಾಗದ ಮನೋಭಾವ ಬೇರೆ ಯಾರಲ್ಲೂ ಸಹ ಕಾಣಲು ಸಾಧ್ಯವಿಲ್ಲ.  ಸರ್ವ ಜನಾಂಗವನ್ನು ಪ್ರೀತಿಸಿ ಶಿಕ್ಷಣ ನೀಡುವ ಶ್ರೀಗಳ ಕಾರ್ಯ ಸ್ವಾಮಿ ವಿವೇಕಾನಂದರು, ಮಹಾತ್ಮಗಾಂಧಿಜೀ ಹಾಗು ಅಂಬೇಡ್ಕರ್‌ರವರು ಶಿಕ್ಷಣಕ್ಕೆ ನೀಡುತ್ತಿದ್ದ ಮಹತ್ವ ಹಾಗು ಆಶಯಗಳಿಗೆ ಅನುಗುಣವಾಗಿವೆ.  ಗುಣಮಟ್ಟದ ಮೌಲ್ಯಯುತವಾದ, ಸಂಸ್ಕಾರಯುತವಾದ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ. ಇದನ್ನು ಶ್ರೀಗಳು ತೋರಿಸಿಕೊಟ್ಟಿದ್ದು, ಶ್ರೀ ಮಠದಲ್ಲಿ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಶ್ರೀಮಠದಲ್ಲಿನ ಸೇವಾ ಕಾರ್ಯಗಳಿಂದ ಸ್ಪೂರ್ತಿಗೊಂಡು ವಿವಿಧ ಸೇವೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬದಕನ್ನು ಸಾರ್ಥಕಗೊಳಿಸಿಕೊಳ್ಳುವ ದಾರಿಯಲ್ಲಿ ಸಾಗುತ್ತಿದ್ದಾರೆ. ಅಲ್ಲದೆ ದಿವಂಗತ ಪುನೀತ್‌ರಾಜ್‌ಕುಮಾರ್ ಸೇರಿದಂತೆ ಅನೇಕರಿಗೆ ಶ್ರೀ ಮಠದ ಸೇವಾ ಕಾರ್ಯಗಳು ಪ್ರೇರಣೆಯನ್ನುಂಟುಮಾಡಿವೆ ಎಂದರು.
      ತ್ರಿವಿಧ ದಾಸೋಹದ ಮೂಲಕ ಬದುಕಿನುದ್ದಕ್ಕೂ ಸಾಧನೆಗಳ ದಾರಿಯಲ್ಲಿ ಸಾಗಿ ಬಂದಿರುವ ಶ್ರೀಗಳಿಗೆ ಸರಿಸಮಾನವಾಗಿ ಯಾರನ್ನು ಸಹ ಕಾಣಲು ಸಾಧ್ಯವಿಲ್ಲ.  ಭೂಮಿಗೆ ಭೂಮಿ, ಸೂರ್ಯನಿಗೆ ಸೂರ್ಯ, ಆಕಾಶಕ್ಕೆ ಆಕಾಶ, ಸಮುದ್ರಕ್ಕೆ ಸಮುದ್ರ ಹೋಲಿಕೆ ಮಾಡಿದಂತೆ ಶ್ರೀಗಳನ್ನು ಹೋಲಿಕೆ ಮಾಡಬಹುದು ಹೊರತು ಬೇರೆ ಯಾರನ್ನು ಸಹ ಹೋಲಿಕೆ ಮಾಡಲು ಸಾಧ್ಯವಿಲ್ಲ. ಶ್ರೀಗಳ ಬದುಕು ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದೆ. ಪ್ರತಿಯೊಬ್ಬರು ತಮ್ಮ ಬದುಕಿನ ವ್ಯಾಪ್ತಿಯನ್ನು ಅರಿತು ಕಾಯಕವನ್ನು ಗೌರವಿಸುವ ಮೂಲಕ ಸಮಾಜದಲ್ಲಿ ಬದುಕು ರೂಪಿಸಿಕೊಳ್ಳಬೇಕೆಂದರು.
    ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಶ್ರೀ ಮಠದ ಕುರಿತು ಹೇಳಿರುವ ಮಾತುಗಳು ಇಂದಿಗೂ ಸತ್ಯವಾಗಿವೆ. ಉತ್ತರದಲ್ಲಿ ಗಂಗೆ, ದಕ್ಷಿಣದಲ್ಲಿ ಸಿದ್ದಗಂಗಾ ನಮ್ಮ ದೇಶದ ಆಸ್ತಿಗಳಾಗಿವೆ. ಶ್ರೀಗಳ ಹೆಸರೇ ನಮ್ಮಲ್ಲಿ ಒಂದು ವಿಶಿಷ್ಟ ಭಕ್ತಿಯ ಭಾವನೆಯನ್ನು ಅರಳಿಸುತ್ತದೆ. ಭಕ್ತಿ, ಸೇವೆ, ನಾನಾ ಪ್ರಕಾರಗಳ ದಾಸೋಹದ ಮೂಲಕ ನಮ್ಮ ಬದುಕನ್ನು ಪರಿಪೂರ್ಣವಾಗಿಸಲು, ಸಾರ್ಥಕಗೊಳಿಸಿಕೊಳ್ಳಲು ಅದು ಪ್ರೇರೇಪಿಸುತ್ತದೆ. ಇಂತಹ ಶ್ರೀಗಳ ಜೊತೆಗಿನ ಒಡನಾಟದ ನೆನಪೇ ಸಾಕು, ನಾವೆಷ್ಟು ಅದೃಷ್ಟಶಾಲಿಗಳು ಎಂದರು.
ಕೋವಿಡ್ ಸಂದರ್ಭದಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಬಡ ಜನರಿಗೆ ಉಚಿತವಾಗಿ ಆಹಾರ ಧ್ಯಾನಗಳನ್ನು ವಿತರಿಸಲು ಶ್ರೀ ಮಠದ ದಾಸೋಹ ಪರಿಕಲ್ಪನೆಯೇ ಪ್ರೇರಣೆಯಾಗಿದೆ. ಈ ನಾಡಿನಲ್ಲಿ ಹಸಿವಿಗೆ ಜಾಗವಿಲ್ಲ. ಇಂತಹ ಆದರ್ಶವನ್ನು ಸರ್ಕಾರ ಅನುಸರಿಸುತ್ತಿರವುದು ಈ ಮಠದ ಹೆಗ್ಗಳಿಕೆಯಾಗಿದೆ ಎಂದರು.
    ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರರಾದ ನಾಡೋಜ ಡಾ. ಗೊ.ರು. ಚನ್ನಬಸಪ್ಪ ಮಾತನಾಡಿ, ಶ್ರೀಗಳೊಂದಿಗಿನ ಸಂಬಂಧ ಹಾಗು ಮಠದ ಕಾರ್ಯ ವೈಖರಿಗಳ ಕುರಿತು ವಿವರಿಸಿದರು.
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಬಿ.ಕೆ ಸಂಗಮೇಶ್ವರ್, ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ,  ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ವೀರಶೈವ ಲಿಂಗಾಯತ ಸಮಾಜದ ವಿವಿಧ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಸಮಾಜದ ಸಾವಿರಾರು ಮಂದಿ ಪಾಲ್ಗೊಂಡಿದ್ದರು.
    ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ ಸ್ವಾಗತಿಸಿದರು. ಅಡವೀಶಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಬಿ.ಜಿ ಧನಂಜಯ ನಿರೂಪಿಸಿದರು.

No comments:

Post a Comment