Sunday, April 3, 2022

ಏ.೧೧ರಂದು ‘ನನ್ನೊಳಗೆ’ ಕವನ ಸಂಕಲನ ಬಿಡುಗಡೆ, ಸಾಧಕರಿಗೆ ಪ್ರಶಸ್ತಿ ಪ್ರದಾನ

    ಭದ್ರಾವತಿ, ಏ. ೩: ತಾಲೂಕಿನ ಸುಲ್ತಾನ್ ಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ, ಅಂತರಾಷ್ಟ್ರೀಯ ಜಾನಪದ ಕಲಾವಿದ ಎಂ.ಆರ್ ರೇವಣಪ್ಪನವರ 'ನನ್ನೊಳಗೆ' ಕವನ ಸಂಕಲನ ಬಿಡುಗಡೆ ಹಾಗು ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಏ.೧೧ರಂದು ಹೊಸನಗರ ತಾಲೂಕಿನ ಮಾದಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಂಜೆ ೪ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
    ಶಿವಮೊಗ್ಗ ಜಾನಪದ ಕಲಾ ಮತ್ತು ಸಾಹಿತ್ಯ ವೇದಿಕೆ ಹಾಗು ಮಾದಾಪುರ ಶ್ರೀ ಶನಿಪರಮೇಶ್ವರ ಯುವಕ ಸಂಘದ ವತಿಯಿಂದ ಸಮಾರಂಭ ಆಯೋಜಿಸಲಾಗಿದೆ.
    ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಗಣೇಶ್, ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ,  ಶಿಕ್ಷಕಿ ಭಾರತಿ ಗೋವಿಂದಸ್ವಾಮಿ, ಮಹಾಬಲೇಶ್ವರ ಹೆಗಡೆ, ಹುಚ್ಚಪ್ಪ ಮಾಸ್ಟರ್, ಲಕ್ಷ್ಮಣ್ ರಾವ್ ಬೋರತ್, ನಿಸ್ಸಾರ್ ಖಾನ್ ಕೆಂಚಾಯಿಕೊಪ್ಪ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
    ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ಶಿಕ್ಷಣದ ಹಿನ್ನಲೆಯಲ್ಲಿ ಜಾನಪದ ಸಾಹಿತ್ಯ ಕುರಿತು ಉಪನ್ಯಾಸ ನೀಡಲಿದ್ದು, ಜ್ಯೂನಿಯರ್ ಶಂಕರ್‌ನಾಗ್, ಜ್ಯೂನಿಯರ್ ವಿಷ್ಣುವರ್ಧನ್ ಮತ್ತು ಜ್ಯೂನಿಯರ್ ಪುನೀತ್ ರಾಜ್‌ಕುಮಾರ್ ಕಲಾವಿದರಿಂದ ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮಗಳು ಜರುಗಲಿವೆ.

No comments:

Post a Comment