Monday, November 22, 2021

ಕನಕದಾಸರ ಸಂದೇಶ ಸಾರ್ಥಕಗೊಳಿಸುವ ಕಾರ್ಯ ಶ್ಲಾಘನೀಯ : ಡಾ. ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ


ಭದ್ರಾವತಿಯಲ್ಲಿ ಸನಾತನ ಹಿಂದೂ ಸಮಾಜ ಪರಿಷತ್ ವತಿಯಿಂದ ಸೋಮವಾರ ನಗರದ ರಂಗಪ್ಪ ವೃತ್ತದಲ್ಲಿ ಎಲ್ಲಾ ಜಾತಿ, ಸಮುದಾಯದವರೊಂದಿಗೆ ಒಗ್ಗೂಡಿ ಹಮ್ಮಿಕೊಳ್ಳಲಾಗಿದ್ದ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ತಾವರೆಕರೆ ಶ್ರೀಗಳು ಹಾಗೂ ಬಿಳಿಕಿ ಶ್ರೀಗಳು ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.  
    ಭದ್ರಾವತಿ, ನ. ೧೧: ನಾವುಗಳು ಪುಸ್ತಕದಲ್ಲಿ ಓದಿ ತಿಳಿದುಕೊಂಡಿರುವ ಸಮಾಜದಲ್ಲಿ ಯಾವುದೇ ಜಾತಿ ಇಲ್ಲ. ಎಲ್ಲರೂ ಒಂದೇ ಎಂಬ ಕನಕದಾಸರ ಸಂದೇಶವನ್ನು ಉಕ್ಕಿನ ನಗರದಲ್ಲಿ ಇಂದು ಸನಾತನ ಹಿಂದೂ ಸಮಾಜ ಪರಿಷತ್ ಸಾರ್ಥಕಗೊಳಿಸುವ ಕಾರ್ಯ ಕೈಗೊಂಡಿರುವುದು ಶ್ಲಾಘನೀಯ ಎಂದು ತಾವರೆಕರೆ ಶಿಲಾ ಮಠದ ಡಾ. ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
    ಶ್ರೀಗಳು ಸೋಮವಾರ ಸಂಜೆ ಸನಾತನ ಹಿಂದೂ ಸಮಾಜ ಪರಿಷತ್ ವತಿಯಿಂದ ನಗರದ ರಂಗಪ್ಪವೃತ್ತದಲ್ಲಿ ಎಲ್ಲಾ ಜಾತಿ, ಸಮುದಾಯದವರೊಂದಿಗೆ ಒಗ್ಗೂಡಿ ಹಮ್ಮಿಕೊಳ್ಳಲಾಗಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
    ಜಗತ್ತಿಗೆ ಸಮಾನತೆ ಪರಿಕಲ್ಪನೆ ಸಾರಿದ ಕನಕದಾಸರು ಎಲ್ಲರಿಗೂ ಬೇಕು. ಭೂಮಿ ಇರುವುದು ಮಾನವ ಜಾತಿ ಮಾತ್ರ. ಮಾನವ ಜಾತಿಯಿಂದ ಮನುಷ್ಯ ಮಹಾದೇವನಾಗಿ ರೂಪುಗೊಳ್ಳಬೇಕು. ಈ ಮೂಲಕ ಸದೃಢ ಸಮಾಜ ನಿರ್ಮಾಣಗೊಳ್ಳಬೇಕು. ಈ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಕಾರ್ಯ ನಿರಂತರವಾಗಿ ನಡೆಯಬೇಕೆಂದರು.
      ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿಂದೂ ಸಮಾಜದ ಎಲ್ಲಾ ಜಾತಿ ಸಮುದಾಯಗಳನ್ನು ಒಂದು ಗೂಡಿಸುವ ಕಾರ್ಯ ರಾಜ್ಯದಲ್ಲಿಯೇ ಮೊದಲ ಬಾರಿಗೆ ಉಕ್ಕಿನ ನಗರದಿಂದ ಕೈಗೊಂಡಿರುವುದು ಹೆಮ್ಮೆಯವಾಗಿದೆ. ಯಾವುದೇ ಕಾರ್ಯಕ್ಕೂ ಸಂಘಟನೆ ಬಹಳ ಮುಖ್ಯವಾಗಿದೆ. ಸಂಘಟನೆ ಮೂಲಕ ನಮ್ಮ ಗುರಿ ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಮತ್ತಷ್ಟು ಸಂಘಟಿತರಾಗಬೇಕು. ಪ್ರಸ್ತುತ ಹಿಂದೂ ಸಮಾಜದಲ್ಲಿ ಮತಾಂತರ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗಬೇಕೆಂದರು.  
    ಪರಿಷತ್ ತಾಲೂಕು ಸಂಚಲನ ಸಮಿತಿ ಸದಸ್ಯ ಕೆ.ಎನ್ ಶ್ರೀಹರ್ಷ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
    ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಸಿದ್ದಲಿಂಗಯ್ಯ, ಕುರುಬ ಸಮಾಜದ ಅಧ್ಯಕ್ಷ ಬಿ.ಎಂ ಸತೋಷ್, ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ, ವಾಲ್ಮೀಕ ನಾಯಕ ಸಮಾಜದ ಬಸವರಾಜ ಬಿ. ಆನೇಕೊಪ್ಪ, ಭೋವಿ ಸಮಾಜದ ಜಿ. ಆನಂದಕುಮಾರ್, ಬ್ರಾಹ್ಮಣ ಸಮಾಜದ ರಮಾಕಾಂತ್, ಬಲಿಜ ಸಮಾಜದ ಅಧ್ಯಕ್ಷ ಸುಬ್ರಮಣ್ಯ, ಛಲವಾದಿ ಸಮಾಜದ ಅಧ್ಯಕ್ಷ ಚನ್ನಪ್ಪ, ದೇವಾಂಗ ಸಮಾಜದ ಅಧ್ಯಕ್ಷ ಎಂ. ಪ್ರಭಾಕರ್, ಪ್ರಮುಖರಾದ ಮಂಗೋಟೆ ರುದ್ರೇಶ್, ನಟರಾಜ್, ಸುಬ್ರಮಣ್ಯ, ಎಚ್. ರವಿಕುಮಾರ್, ಕೋಗಲೂರು ತಿಪ್ಪೇಸ್ವಾಮಿ, ಎಚ್. ತಿಮ್ಮಪ್ಪ, ಸಿ. ಚನ್ನಪ್ಪ, ಶಿವಾಜಿರಾವ್, ಸುಭಾಷ್, ಶ್ರೀನಿವಾಸ್, ಜಿಲ್ಲಾ ಯೂನಿಯನ್ ಬ್ಯಾಂಕ್ ದುಗ್ಗೇಶ್, ನಗರಸಭಾ ಸದಸ್ಯರಾದ ಕಾಂತರಾಜ್, ಶ್ರೇಯಸ್, ಪವನ್‌ಕುಮಾರ್ ಉಡುಪ ಸೇರಿದಂತೆ ಎಲ್ಲಾ ಜಾತಿ, ಸಮುದಾಯಗಳ ಪ್ರಮುಖರು ಪಾಲ್ಗೊಂಡಿದ್ದರು.

No comments:

Post a Comment