Monday, November 22, 2021

ಅಪ್ರಾಪ್ತ ಬಾಲಕಿಯೊಂದಿಗೆ ವಿವಾಹ : ೨೦ ಜನರ ವಿರುದ್ಧ ಪ್ರಕರಣ ದಾಖಲು

    ಭದ್ರಾವತಿ, ನ. ೨೨: ತಾಲೂಕಿನ ನಾಗತಿಬೆಳಗಲು ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ವಿವಾಹ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
    ಈ ಸಂಬಂಧ ಕಳೆದ ೩ ದಿನಗಳ ಹಿಂದೆ ನ.೧೯ರಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮದುವೆಗೆ ಸಹಕರಿಸಿದ ೨೦ ಜನರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
    ಸೊರಬ ತಾಲೂಕಿನ ಅಪ್ರಾಪ್ತ ಬಾಲಕಿಯೊಂದಿಗೆ ತಾಲೂಕಿನ ಯುವಕನೋರ್ವ ನಾಗತಿಬೆಳಗಲು ಗ್ರಾಮದ ಸಮುದಾಯ ಭವನದಲ್ಲಿ ನ.೧೩ರಂದು ವಿವಾಹವಾಗಿದ್ದು, ಬಾಲ್ಯ ವಿವಾಹ ಎಂಬುದು ಖಚಿತವಾದ ಹಿನ್ನಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ರಕ್ಷಣಾ ಘಟಕ ಹಾಗು ಪೊಲೀಸರು ಅಪ್ರಾಪ್ತ ಬಾಲಕಿ ರಕ್ಷಣೆಗೆ ಮುಂದ್ದಾಗಿದ್ದರು. ಆದರೆ ಸಂಬಂಧಿಕರು ಯಾವುದೇ ದೂರು ಕೊಡಲು ಮುಂದಾಗದ ಹಿನ್ನಲೆಯಲ್ಲಿ ಅಂತಿಮವಾಗಿ ಪೊಲೀಸರು ಬಾಲಕಿಯ ಹೇಳಿಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ. ಬಾಲಕಿಯನ್ನು ಶಿವಮೊಗ್ಗ ಸುರಭಿ ಉಜ್ವಲ ಕೇಂದ್ರಕ್ಕೆ ದಾಖಲಿಸಲಾಗಿದೆ.
    ಮದುವೆಗೆ ಸಹಕರಿಸಿದ ಅಪ್ರಾಪ್ತೆ ಬಾಲಕಿ ಹಾಗು ಯುವಕನ ಪೋಷಕರು, ಸಂಬಂಧಕರು,  ಸಮುದಾಯ ಭವನದ ಆಡಳಿತ ಮಂಡಳಿ ಅಧ್ಯಕ್ಷರು, ಖಜಾಂಚಿ ಹಾಗು ವ್ಯವಸ್ಥಾಪಕರು ಮತ್ತು ಮದುವೆ ಶಾಸ್ತ್ರ ನೆರವೇರಿಸಿಕೊಟ್ಟಿರುವ ಅರ್ಚಕರು ಸೇರಿದಂತೆ ಒಟ್ಟು ೨೦ ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎನ್ನಲಾಗಿದೆ.  

No comments:

Post a Comment