ಭದ್ರಾವತಿಯಲ್ಲಿ ಭೂಮಿಕಾ ವೇದಿಕೆ ವತಿಯಿಂದ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಜಾನಪದ ಸಂಜೆ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಾವಳ್ಳಿ ಜ್ಞಾನದೀಪ ಎಸ್.ಎಸ್ ಶಾಲೆಯ ಕನ್ನಡ ವಿಭಾಗದ ಮುಖ್ಯಸ್ಥ ಸಾಹಿತಿ, ಗಾಯಕ ಟಿ. ಮಲ್ಲಿಕಾರ್ಜುನ್ ಪಾಲ್ಗೊಂಡು ಮಾತನಾಡಿದರು.
ಭದ್ರಾವತಿ, ನ. ೨೨: ಕನ್ನಡ ಭಾಷೆಗೆ ಸುಮಾರು ೨೫೦೦ ವರ್ಷಗಳ ಇತಿಹಾಸವಿದ್ದು, ಜಗತ್ತಿನ ಪ್ರಮುಖ ೨೫ ಭಾಷೆಗಳಲ್ಲಿ ಕನ್ನಡ ಸಹ ಒಂದಾಗಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಶಿವಮೊಗ್ಗ ಜಾವಳ್ಳಿ ಜ್ಞಾನದೀಪ ಎಸ್.ಎಸ್ ಶಾಲೆಯ ಕನ್ನಡ ವಿಭಾಗದ ಮುಖ್ಯಸ್ಥ ಸಾಹಿತಿ, ಗಾಯಕ ಟಿ. ಮಲ್ಲಿಕಾರ್ಜುನ್ ಹೇಳಿದರು.
ಭೂಮಿಕಾ ವೇದಿಕೆ ವತಿಯಿಂದ ನಗರದ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಜಾನಪದ ಸಂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕನ್ನಡದ ಅತ್ಯಂತ ಪ್ರಾಚೀನ ಗ್ರಂಥವಾಗಿರುವ ಕವಿರಾಜಮಾರ್ಗ, ಗದ್ಯ ಕೃತಿ ವಡ್ಡಾರಾಧನೆ, ಪಂಪ, ರನ್ನರ ಕಾವ್ಯಗಳು ಕನ್ನಡ ಭಾಷೆ, ಸಾಹಿತ್ಯ ಅತ್ಯಂತ ಪ್ರಾಚೀನ ವಾದ್ದದ್ದು ಎಂಬುದಕ್ಕೆ ಸಾಕ್ಷಿಗಳಾಗಿವೆ ಎಂದರು.
ಈ ನಡುವೆ ೧೨ನೇ ಶತಮಾನದಲ್ಲಿ ಜನರ ಭಾವನೆಯನ್ನು, ಭಕ್ತಿಯನ್ನು ಸರಳವಾಗಿ ಹೇಳುವ ವಚನ ಸಾಹಿತ್ಯ, ಹರಿಹರ, ರಾಘವಾಂಕ, ಕನಕದಾಸ, ಪುರಂದರ ದಾಸರು ಸೇರಿದಂತೆ ದಾಸಾದಿಗಳ ಸಾಹಿತ್ಯ, ಕನ್ನಡದ ಸಾಂಗತ್ಯ ಕವಿಗಳಲ್ಲಿ ಅಗ್ರಗಣ್ಯನಾದ ರತ್ನಾಕರವರ್ಣಿಯವರ ಕೃತಿಗಳು, ಹಳೇಗನ್ನಡ, ಹೊಸಗನ್ನಡ, ನವೋದಯ, ನವ್ಯ, ಪ್ರಗತಿಶೀಲ ಹಾಗು ಜಾನಪದ ಸಾಹಿತ್ಯಗಳು ಕನ್ನಡ ಭಾಷೆ, ಸಾಹಿತ್ಯಕ್ಕೆ ಮತ್ತಷ್ಟು ಮೆರಗು ತಂದುಕೊಟ್ಟಿವೆ ಎಂದರು.
ವೇದಿಕೆ ಅಧ್ಯಕ್ಷ ಡಾ. ಕೃಷ್ಣ ಎಸ್. ಭಟ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಾನಪದ ಗಾಯನ, ನೃತ್ಯ ರೂಪಕ, ಒಗಟು, ಕೋಲಾಟ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಡಾ. ವೀಣಾಭಟ್ ಸ್ವಾಗತಿಸಿ, ಡಾ. ಎಚ್.ವಿ ನಾಗರಾಜ್ ವಂದಿಸಿದರು. ಶಾರದ ಶ್ರೀನಿವಾಸ್ ನಿರೂಪಿಸಿದರು. ವೇದಿಕೆ ಕಾರ್ಯದರ್ಶಿ ಮುನಿರಾಜ್ ಉಪಸ್ಥಿತರಿದ್ದರು. ಇದಕ್ಕೂ ಮೊದಲು ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಚಲನಚಿತ್ರ ನಟ, ಸಮಾಜಸೇವಕ ಪುನೀತ್ ರಾಜ್‌ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಗೌರವ ಸಲ್ಲಿಸಲಾಯಿತು.
No comments:
Post a Comment