ಬುಧವಾರ, ಸೆಪ್ಟೆಂಬರ್ 24, 2025

ಪ್ರೇಯಸಿಯನ್ನು ಭದ್ರಾ ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಆರೋಪ : ಪ್ರಿಯಕರ ಸೇರಿ ಇಬ್ಬರ ವಿರುದ್ಧ ಪ್ರಕರಣ ದಾಖಲು

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು : ಪ್ರಿಯಕರ, ಆತನ ತಂದೆ ವಶಕ್ಕೆ ಪಡೆದ ಪೊಲೀಸರು

ಕೊಲೆಯಾದ ಸ್ವಾತಿ, ಭದ್ರಾ ಕಾಲುವೆ
    ಭದ್ರಾವತಿ:  ಪ್ರೇಯಸಿಯನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಆರೋಪದ ಮೇಲೆ ಪ್ರಿಯಕರ ಹಾಗು ಆತನ ತಂದೆಯನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 
    ತಾಲೂಕಿನ ಉಕ್ಕುಂದ ಗ್ರಾಮದ ಸಮೀಪದ ಭದ್ರಾ ಕಾಲುವೆಯಲ್ಲಿ ಕಳೆದ ೩ ದಿನಗಳ ಹಿಂದೆ ಘಟನೆ ನಡೆದಿದ್ದು, ಪ್ರೇಯಸಿ ಸ್ವಾತಿಯನ್ನು ಸೂರ್ಯ ಕೊಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ. ಸ್ವಾತಿಯನ್ನು ಕಾಲುವೆಗೆ ತಳ್ಳಿದ ನಂತರ ವಿಷ ಸೇವಿಸಿ ತಾನೂ ಆತ್ಮಹತ್ಯೆಗೆ ಯತ್ನಿಸುವ ಮೂಲಕ ಹೈಡ್ರಾಮಾವೇ ನಡೆಸಿದ್ದ ಎನ್ನಲಾಗಿದೆ. ಸದ್ಯ ಆತನ ಬಣ್ಣ ಬಯಲಾಗಿದ್ದು, ಸೂರ್ಯ ಮತ್ತು ಆತನ ತಂದೆ ಸ್ವಾಮಿ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
    ಪ್ರಕರಣದ ವಿವರ: 
    ಸೂರ್ಯ ಮತ್ತು ಸ್ವಾತಿ ಇಬ್ಬರು ಪ್ರೀತಿಸುತ್ತಿದ್ದರು. ಸ್ವಾತಿ ಪದವಿ ಎರಡನೇ ವರ್ಷ ವ್ಯಾಸಾಂಗ ಮಾಡುತ್ತಿದ್ದಳು. ಸೂರ್ಯ ಮದುವೆ ಆಗುವುದಕ್ಕೆ ಪೀಡಿಸುತ್ತಿದ್ದ. ಆದರೆ ಇತ್ತ ಸ್ವಾತಿ ಮನೆಯವರು ಓದು ಮುಗಿಯುವವರೆಗೆ ಮದುವೆ ಬೇಡ ಅಂದಿದ್ದಾರೆ. ಸೆ. ೨೧ ರಂದು ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಕೂಡ ನಡೆದಿತ್ತು.
    ಸೆ.೨೧ರಂದು ಸ್ವಾತಿಯನ್ನು ಸೂರ್ಯ ಮನೆಯಿಂದ ಭದ್ರಾ ಕಾಲುವೆಗೆ ಕರೆದೊಯ್ದು ಅಲ್ಲಿಂದ ತಳ್ಳಿ ಕೊಲೆ ಮಾಡಿರುವ ಆರೋಪ ಮಾಡಲಾಗಿದೆ. ಮಂಗಳವಾರ ಸಂಜೆ ಯುವತಿಯ ಶವ ಪತ್ತೆಯಾಗಿದೆ. ಸ್ವಾತಿ ಕುಟುಂಬಸ್ಥರಿಂದ ಸೂರ್ಯ ಮತ್ತು ಕೊಲೆಗೆ ಕುಮ್ಮಕ್ಕು ಹಿನ್ನಲೆ ಆತನ ತಂದೆ ಸ್ವಾಮಿ ಮೇಲೆ ಸೆ. ೨೩ ರಂದು ಠಾಣೆಗೆ ದೂರು ನೀಡಿದ್ದರು.
    ಸದ್ಯ ಗ್ರಾಮಾಂತರ ಪೊಲೀಸರು ಎ೧ ಸೂರ್ಯ ಮತ್ತು ಎ೨ ಸ್ವಾಮಿ ವಿರುದ್ಧ ಕೊಲೆ ಕೇಸ್ ದಾಖಲಿಸಿ, ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ