ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಭದ್ರಾವತಿ ಘಟಕ, ನಗರ ಸಾರಿಗೆ ವಿಭಾಗದಿಂದ ಬೈ ಪಾಸ್ ರಸ್ತೆ ಸಿದ್ದಾಪುರ ಮಾರ್ಗದಲ್ಲಿ ಶಿವಮೊಗ್ಗ-ಭದ್ರಾವತಿ ನಡುವಿನ ಸಂಚಾರಕ್ಕೆ ಅಧಿಕೃತವಾಗಿ ಹೊಸದಾಗಿ ೪ ಬಸ್‌ಗಳ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.
ಭದ್ರಾವತಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಭದ್ರಾವತಿ ಘಟಕ, ನಗರ ಸಾರಿಗೆ ವಿಭಾಗದಿಂದ ಬೈ ಪಾಸ್ ರಸ್ತೆ ಸಿದ್ದಾಪುರ ಮಾರ್ಗದಲ್ಲಿ ಶಿವಮೊಗ್ಗ-ಭದ್ರಾವತಿ ನಡುವಿನ ಸಂಚಾರಕ್ಕೆ ಅಧಿಕೃತವಾಗಿ ಹೊಸದಾಗಿ ೪ ಬಸ್‌ಗಳ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.
ನಗರದ ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಹಿನ್ನಲೆಯಲ್ಲಿ ಕಳೆದ ೩ ವರ್ಷಗಳಿಂದ ನಗರದ ಮುಖ್ಯ ಬಸ್ ನಿಲ್ದಾಣದಿಂದ ಉಂಬ್ಳೇಬೈಲ್ ರಸ್ತೆ, ಜಯಶ್ರೀ ವೃತ್ತ, ಮಿಲ್ಟ್ರಿಕ್ಯಾಂಪ್ ಕೃಷ್ಣಪ್ಪ ವೃತ್ತ ಮೂಲಕ ಸಿದ್ದಾಪುರ ಬೈಪಾಸ್ ಮಾರ್ಗವಾಗಿ ಜೇಡಿಕಟ್ಟೆಯಿಂದ ಶಿವಮೊಗ್ಗ-ಭದ್ರಾವತಿ ನಡುವೆ ಕೆಎಸ್‌ಆರ್‌ಟಿಸಿ ಬಸ್ಸುಗಳು ಸಂಚರಿಸುತ್ತಿದ್ದವು. ಇದರಿಂದ ಸಿದ್ದಾಪುರ, ಹುಡ್ಕೋ ಕಾಲೋನಿ, ಕಾಗದನಗರ, ಮಿಲ್ಟ್ರಿಕ್ಯಾಂಪ್, ಬುಳ್ಳಾಪುರ, ನ್ಯೂಟೌನ್, ಆಂಜನೇಯ ಅಗ್ರಹಾರ, ವಿದ್ಯಾಮಂದಿರ, ಗಣೇಶ್ ಕಾಲೋನಿ, ಜನ್ನಾಪುರ ಸುತ್ತಮುತ್ತಲ ಪ್ರದೇಶದ ಸಾರ್ವಜನಿಕರಿಗೆ ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿತ್ತು.
ಇತ್ತೀಚೆಗೆ ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಕ್ತಾಯಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗಿರುವುದರಿಂದ ಎಲ್ಲಾ ವಾಹನಗಳು ರೈಲ್ವೆ ಮೇಲ್ಸೇತುವೆ ಮೇಲೆ ಸಂಚರಿಸುತ್ತಿವೆ. ಇದರಿಂದ ಬೈಪಾಸ್ ರಸ್ತೆ ಸಿದ್ದಾಪುರ ಮಾರ್ಗದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡುವಂತೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿರುವ ಘಟಕದ ನಗರ ಸಾರಿಗೆ ವಿಭಾಗ ೪ ಬಸ್‌ಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದರ ಸದುಪಯೋಗಪಡೆದುಕೊಳ್ಳುವಂತೆ ಘಟಕದ ಅಧಿಕಾರಿಗಳು ಮನವಿ ಮಾಡಿದ್ದಾರೆ.
No comments:
Post a Comment