ಸೋಮವಾರ, ಡಿಸೆಂಬರ್ 9, 2024

ಮಕ್ಕಳನ್ನು ಸೃಜನಶೀಲ ಮನಸ್ಸುಗಳನ್ನು ಹೊಂದಿರುವ ಕ್ರಿಯಾಶೀಲರಾಗಿ ರೂಪಿಸಲು ಕಮ್ಮಟಗಳು ಸಹಕಾರಿ : ಡಿ. ಮಂಜುನಾಥ್

ಭದ್ರಾವತಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ನ್ಯೂಟೌನ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕಾವ್ಯ, ಕಥೆ ಹಾಗು ಪ್ರಬಂಧ ರಚನಾ ಕಮ್ಮಟ ಆಯೋಜಿಸಲಾಗಿತ್ತು. 
    ಭದ್ರಾವತಿ : ನಮ್ಮ ಮಕ್ಕಳನ್ನು ಸೃಜನಶೀಲ ಮನಸ್ಸುಗಳನ್ನು ಹೊಂದಿರುವ ಕ್ರಿಯಾಶೀಲರಾಗಿ ರೂಪಿಸಲು ಕಮ್ಮಟಗಳು ಸಹಕಾರಿಯಾಗಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರಾದ ಡಿ. ಮಂಜುನಾಥ್ ಹೇಳಿದರು. 
    ಅವರು ಸೋಮವಾರ ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ನಗರದ ನ್ಯೂಟೌನ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕಾವ್ಯ, ಕಥೆ ಹಾಗು ಪ್ರಬಂಧ ರಚನಾ ಕಮ್ಮಟ ಉದ್ಘಾಟಿಸಿ ಮಾತನಾಡಿದರು.  
    ಶಿಕ್ಷಣದ ಜೊತೆ ಭಾಷೆ, ಸಾಹಿತ್ಯ, ಸೃಜನಶೀಲ ಚಿಂತನೆ ಎಲ್ಲವೂ ಅನುಭವಕ್ಕೆ ಬರಬೇಕು. ಆದರೆ ಅಂಕಗಳ ಹಿಂದೆ ಓಡುವ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟ ಕಳಪೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. 
    ನಮ್ಮ ಮಕ್ಕಳು ಕವಿಯಾಗಿ, ಕಥೆಗಾರರಾಗಿ, ಪ್ರಬಂಧಕಾರರಾಗಿ ಸೃಜನಶೀಲ ಮನಸ್ಸುಗಳನ್ನು ಹೊಂದಿರುವ ಕ್ರಿಯಾಶೀಲರಾಗಿ ರೂಪಿಸಲು ಕಮ್ಮಟಗಳು ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿ ಕಳೆದ ೧೯ ವರ್ಷಗಳಿಂದ ಜಿಲ್ಲೆಯಲ್ಲಿ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಕ್ರಿಯಾಶೀಲ ಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳ ಸಮಯ ಅಮೂಲ್ಯವಾಗಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಿ ಎಂದರು. 
        ಕ್ಷೇತ್ರ ಶಿಕ್ಷಣಾಧಿಕಾರಿ ಎ. ಕೆ. ನಾಗೇಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ರೂಪಿಸಲು ಕಮ್ಮಟಗಳು ಉಪಯುಕ್ತವಾಗಿವೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬರೆಯಲು, ಮಾತನಾಡಲು ಸಾಧ್ಯವಾಗದಿದ್ದರೆ ಆಲಿಸುವ, ಮಾತನಾಡುವ ಕೌಶಲ್ಯ ಬೆಳೆಸಿಕೊಳ್ಳ ಬೇಕು. ಪ್ರಾಥಮಿಕ ಶಿಕ್ಷಣಕ್ಕೆ ಭದ್ರವಾದ ಬುನಾದಿ ಹಾಕಬೇಕು. ಅದು ಕೆಲವೆಡೆ ಆಗುತ್ತಿಲ್ಲ ಎನ್ನುವ ಕೊರಗಿದೆ ಎಂದರು. 
        ಸಂಪನ್ಮೂಲ ವ್ಯಕ್ತಿಗಳಾಗಿದ್ದ ಸಾಹಿತಿಗಳು, ವಿಶ್ರಾಂತ ಪ್ರಾಂಶುಪಾಲರಾದ ಡಾ. ಎಚ್. ಟಿ. ಕೃಷ್ಣಮೂರ್ತಿ ಅವರು ಕವಿತೆ ನಿಮ್ಮೊಳಗೆ ಹುಟ್ಟುತ್ತೆ. ಅದು ಹೇಗಿರುತ್ತೆ ಎಂದು ವಿವರಿಸಿದರು.
         ರಂಗಕರ್ಮಿ, ಸಹ ಪ್ರಾಧ್ಯಾಪಕ ಡಾ. ಜಿ. ಆರ್. ಲವ ಕಥೆ ರಚನೆ ಕುರಿತು ಹಾಗು ಸಾಹಿತಿ ಅಂಕಣಕಾರ ಬಿ. ಚಂದ್ರೇಗೌಡ ಪ್ರಬಂಧ ಸಾಹಿತ್ಯ ಕುರಿತು ಮಾಹಿತಿ ನೀಡಿದರು.
        ಉಪ ಪ್ರಾಂಶುಪಾಲ ದಯಾನಂದ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ರವೀಂದ್ರ, ಕಾಂತರಾಜ್ ಉಪಸ್ಥಿತರಿದ್ದರು.
ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಉಮಾಪತಿ ಸ್ವಾಗತಿಸಿದರು. ತಾಲೂಕು ಕಸಾಪ ಕಟ್ಟಡ ಸಮಿತಿ ಅಧ್ಯಕ್ಷೆ ಡಾ. ವಿಜಯದೇವಿ, ರಂಗ ಕಲಾವಿದರಾದ ವೈ.ಕೆ ಹನುಮಂತಯ್ಯ, ಕಮಲಾಕರ ಹಾಗು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ