Friday, June 19, 2020

ಹಕ್ಕುಪತ್ರ ವಿತರಣೆ, ಖಾತೆ ಮಾಡುವಲ್ಲಿ ಅವ್ಯವಹಾರ

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕರಾವೇ ಆಗ್ರಹ

ವಸತಿ ಯೋಜನೆ ಹಾಗೂ ೯೪ಸಿ ಯೋಜನೆಯಡಿ ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ  ಹಕ್ಕುಪತ್ರ  ವಿತರಣೆ ಹಾಗೂ ಖಾತೆ ಮಾಡುವಲ್ಲಿ ಅವ್ಯವಹಾರ ನಡೆದಿದ್ದು,  ಈ ಹಿನ್ನಲೆಯಲ್ಲಿ ತಕ್ಷಣ ಸಂಪೂರ್ಣ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಕುಮಾರ್ ಶೆಟ್ಟಿ ಬಣ) ವತಿಯಿಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ವ್ಯವಸ್ಥಾಪಕ ಶಿವಕುಮಾರ್ ಮೂಲಕ ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಜೂ. ೧೯: ವಸತಿ ಯೋಜನೆ ಹಾಗೂ ೯೪ಸಿ ಯೋಜನೆಯಡಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ  ಹಕ್ಕುಪತ್ರ  ವಿತರಣೆ ಹಾಗೂ ಖಾತೆ ಮಾಡುವಲ್ಲಿ ಅವ್ಯವಹಾರ ನಡೆದಿದ್ದು,  ಈ ಹಿನ್ನಲೆಯಲ್ಲಿ ತಕ್ಷಣ ಸಂಪೂರ್ಣ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಕುಮಾರ್ ಶೆಟ್ಟಿ ಬಣ) ವತಿಯಿಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ವ್ಯವಸ್ಥಾಪಕ ಶಿವಕುಮಾರ್ ಮೂಲಕ ಮನವಿ ಸಲ್ಲಿಸಲಾಯಿತು. 
ಕೂಡ್ಲಿಗೆರೆ ಹೋಬಳಿ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೨೦೧೫-೧೬ನೇ ಸಾಲಿನಿಂದ ೨೦೧೯-೨೦ರ ವರೆಗೆ ೯೪ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿರುವವರ ಸ್ಥಳ, ಜಾಗದ ಭಾವಚಿತ್ರ ಹಾಗೂ ಹಳೇಯ ಮನೆಗಳನ್ನು ಪರಿಶೀಲಿಸದೆ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿದೆ. ಅಲ್ಲದೆ ಈ ಹಕ್ಕುಪತ್ರಗಳಿಗೆ ಪಂಚಾಯಿತಿಯಲ್ಲಿ ಬೇಕಾಬಿಟ್ಟಿಯಾಗಿ ಖಾತೆ ಮಾಡಿ ಕೊಡಲಾಗಿದೆ. ಮನೆಗಳನ್ನು ಮಂಜೂರು ಮಾಡಿಕೊಡುವ ಮೊದಲು ಅಡಮಾನ ಪತ್ರ  ನೋಂದಾಣಿ ಮಾಡಿಸಿರುವುದಿಲ್ಲ. ಅನುಭವದ ಆಧಾರದಲ್ಲಿ ನಿರ್ಗತಿಕರಿಗೆ ಜಾಗ ನೀಡುವ ಬದಲು ಉಳ್ಳವರಿಗೆ ನೀಡಲಾಗಿದೆ. ಬೇರೆಡೆ ಮನೆ ಮತ್ತು ಜಮೀನು ಇದ್ದರೂ ಸಹ ಹಕ್ಕುಪತ್ರ ನೀಡಿ, ಖಾತೆ ಮಾಡಿಕೊಡಲಾಗಿದೆ ಎಂದು ಆರೋಪಿಸಿದರು. 
ವಿವಿಧ ವಸತಿ ಯೋಜನೆಯಡಿ ಮನೆ ನಿರ್ಮಾಣದ ಮಂಜೂರಾತಿ ಪಡೆದಿರುವ ಫಲಾನುಭವಿಗಳು ಸುಮಾರು ೨೦ ರಿಂದ ೩೦ ಲಕ್ಷ ರು. ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಅಲ್ಲದೆ ಈ ಮನೆಗಳ ಮುಂದೆ ಸರ್ಕಾರದ ಯೋಜನೆಯ ನಾಮಫಲಕ ಅಳವಡಿಸದೆ ಹಾಗೂ ಸರ್ಕಾರ ನಿಗದಿಪಡಿಸಿರುವ ೫ ಲಕ್ಷ ರು. ಒಳಗಿನ ನಿಬಂಧನೆಯನ್ನು ಉಲ್ಲಂಘಿಸಲಾಗಿದೆ. ಆರ್ಥಿಕವಾಗಿ ಸದೃಢರಾಗಿರುವವರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಇವರಿಗೆ ಸರ್ಕಾರದ ೧.೫ ಲಕ್ಷ ರು. ಆರ್ಥಿಕ ನೆರವಿನ ಅವಶ್ಯಕತೆ ಇರುವುದಿಲ್ಲ. ಈ ಎಲ್ಲಾ ವಿಚಾರಗಳನ್ನು ಪರಿಶೀಲಿಸಿದಾಗ ಅವ್ಯವಹಾರ ನಡೆದಿರುವುದು ಕಂಡು ಬರುತ್ತದೆ. ಈ ಹಿನ್ನಲೆಯಲ್ಲಿ ತಕ್ಷಣ ಸಂಪೂರ್ಣ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. 
ಕರಾವೇ ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್ ನೇತೃತ್ವ ವಹಿಸಿದ್ದರು. ಕಾರ್ಯದರ್ಶಿ ಸಂದೇಶ್‌ಕುಮಾರ್, ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಶಿವು, ಟೋನಿ, ರಮೇಶ್, ಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment