ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ವಿದ್ಯಾರ್ಥಿಗಳಿಗೆ ಕರೆ
ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ
ಭದ್ರಾವತಿ, ಜೂ. ೧೯: ಈ ಬಾರಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜೂ.೨೫ ರಿಂದ ಜು.೩ರವರೆಗೆ ತಾಲೂಕಿನ ನಗರ ವ್ಯಾಪ್ತಿಯ ೮ ಹಾಗೂ ಗ್ರಾಮಾಂತರ ವ್ಯಾಪ್ತಿಯ ೭ ಸೇರಿದಂತೆ ಒಟ್ಟು ೧೫ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದ್ದು, ಒಟ್ಟು ೪೫೫೮ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷಾ ಕೇಂದ್ರದ ಪ್ರತಿಯೊಂದು ಕೊಠಡಿಯಲ್ಲಿ ಒಂದು ಬೆಂಚಿನಲ್ಲಿ ತಲಾ ಇಬ್ಬರಂತೆ ಕನಿಷ್ಠ ೧೮ ರಿಂದ ೨೦ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಪಾಡಿಕೊಂಡು ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಯಾವುದೇ ಪರೀಕ್ಷಾ ಕೇಂದ್ರ ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಲ್ಪಟ್ಟಲ್ಲಿ ಪರಿಸ್ಥಿತಿ ಎದುರಿಸಲು ಮೂರು ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಕಾಯ್ದಿರಿಸಿಕೊಳ್ಳಲಾಗಿದೆ ಎಂದರು.
ತಾಲ್ಲ್ಲೂಕಿನ ವಿವಿಧ ಭಾಗದ ಒಟ್ಟು ೨೫೯ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಆಯಾ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಅನುಕೂಲವಾಗುವಂತೆ ಖಾಸಗಿ ಶಾಲೆಗಳ ೧೫ ಬಸ್ಸುಗಳನ್ನು ಸಾರಿಗೆ ಸಂಪರ್ಕಕ್ಕೆ ಬಳಸಿಕೊಳ್ಳಲಾಗುತ್ತಿದೆ. ಒಂದು ಜೊತೆ ಮಾಸ್ಕ್ ಉಚಿತವಾಗಿ ವಿತರಿಸಲಾಗುತ್ತಿದ್ದು, ಪರೀಕ್ಷಾ ಕೊಠಡಿ ಪ್ರವೇಶಿಸುವ ಮೊದಲು ನಡೆಸುವ ತಪಾಸಣೆಯಲ್ಲಿ ಕೆಮ್ಮು, ಶೀತ, ನೆಗಡಿ, ಜ್ವರ ಸೇರಿದಂತೆ ಯಾವುದೇ ರೀತಿಯ ಲಕ್ಷಣಗಳು ಕಂಡು ಬಂದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಪ್ರತಿಯೊಂದು ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಹೊರ ಜಿಲ್ಲೆಗಳ ೭೭ ವಿದ್ಯಾರ್ಥಿಗಳು ತಾಲೂಕಿನಲ್ಲಿ ಹಾಗೂ ತಾಲೂಕಿನ ೧೨೦ ವಿದ್ಯಾರ್ಥಿಗಳು ಹೊರಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಟೈಪಿಂಗ್, ಜೆರಾಕ್ಸ್ ಅಂಗಡಿಗಳು ತೆರೆಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಗೆ ಸಂಬಂಧಪಟ್ಟ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಹೊರತುಪಡಿಸಿ ಇತರರು ಪ್ರವೇಶಿಸುವಂತಿಲ್ಲ. ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಬಳಕೆ ಮಾಡುವಂತಿಲ್ಲ. ೨೦೦ ಮೀ ವ್ಯಾಪ್ತಿಯೊಳಗೆ ೪ ಜನರಿಗಿಂತ ಹೆಚ್ಚಿನ ಜನರು ಸೇರದಂತೆ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದರು.
ಉಳಿದಂತೆ ಒಟ್ಟಾರೆ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆಯುವ ನಿಟ್ಟಿನಲ್ಲಿ ಸಹಕಾರಿಯಾಗುವಂತೆ ಆತ್ಮವಿಶ್ವಾಸ ತುಂಬುವ, ಗೊಂದಲಗಳನ್ನು ನಿವಾರಿಸುವ, ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವ ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಎಲ್ಲಾ ಕ್ರಮಗಳನ್ನು ಇಲಾಖೆವತಿಯಿಂದ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯುವ ವಿಶ್ವಾಸವಿದೆ ಎಂದರು. ಕಚೇರಿ ವ್ಯವಸ್ಥಾಪಕ ಕಾಂತ್‌ರಾಜ್, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಎ.ಜಿ ರಾಜಶೇಖರ್ ಉಪಸ್ಥಿತರಿದ್ದರು.
No comments:
Post a Comment