Tuesday, September 15, 2020

ಕಾಮಕೇಳಿ ಅಧಿಕಾರಿಯಿಂದ ನಾಗರೀಕ ಸಮಾಜಕ್ಕೆ ಅವಮಾನ

ಬಡತನ ಬಂಡವಾಳ ಮಾಡಿಕೊಂಡ ತಹಸೀಲ್ದಾರ್ ಅಮಾನತ್ತು ಯಾವಾಗ...?

ಎಚ್.ಸಿ ಶಿವಕುಮಾರ್
ಭದ್ರಾವತಿ, ಸೆ. ೧೫: ತಾಲೂಕು ದಂಡಾಧಿಕಾರಿಯಾಗಿ ಮೇ.೮ರಂದು ಅಧಿಕಾರ ವಹಿಸಿಕೊಂಡಿದ್ದ ಎಚ್.ಸಿ ಶಿವಕುಮಾರ್ ಸುಮಾರು ೬ ತಿಂಗಳ ಕರ್ತವ್ಯದ ಅವಧಿಯಲ್ಲಿ ಕಾಮಕೇಳಿ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವುದು ನಿಜಕ್ಕೂ ನಾಚಿಗೇಡಿನ ಸಂಗತಿಯಾಗಿದೆ.
       ತಾಲೂಕು ಕಛೇರಿಯಲ್ಲಿ ಸುಮಾರು ೨೫ಕ್ಕೂ ಹೆಚ್ಚು ಸಿಬ್ಬಂದಿಗಳಿದ್ದು, ಈ ಪೈಕಿ ಅರ್ಧದಷ್ಟು ಮಹಿಳಾ ಸಿಬ್ಬಂದಿಗಳಿದ್ದಾರೆ. ಒಂದೆಡೆ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸುಮಾರು ೧ ತಿಂಗಳ ಹಿಂದೆ ತಾಲೂಕು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ೧೦ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಸೋಂಕು ತಗುಲಿತ್ತು. ಈ ಪೈಕಿ ಸೋಂಕಿಗೆ ತುತ್ತಾದವರು ಬಹುತೇಕ ಮಹಿಳೆಯರಾಗಿದ್ದರು. ಎಲ್ಲಾ ಸಿಬ್ಬಂದಿಗಳು ಗುಣಮುಖರಾಗಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ತಮ್ಮ ಅರೋಗ್ಯವನ್ನು ಲೆಕ್ಕಿಸದೆ ಪುನಃ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಈ ರೀತಿಯ ಘಟನೆ ನಡೆದಿರುವುದು ನಿಜಕ್ಕೂ ನಾಗರೀಕ ಸಮಾಜ ತಲೆ ತಗ್ಗಿಸುವಂತದ್ದಾಗಿದೆ.
        ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಕೈಗೊಂಡ ಲಾಕ್‌ಡೌನ್ ಸೇರಿದಂತೆ ಇನ್ನಿತರ ಕಠಿಣ ಕ್ರಮಗಳಿಂದಾಗಿ ಶ್ರೀ ಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದು, ಯಾವುದೇ ವ್ಯಾಪಾರ ವಹಿವಾಟು, ಉದ್ಯೋಗವಿಲ್ಲದೆ ದಿನದ ಬದುಕು ಸಾಗಿಸಲು ಹೆಣಗಾಡುತ್ತಿದ್ದಾರೆ. ಅಧಿಕಾರಿಯೊಬ್ಬರು ಬಡತನವನ್ನು ಬಂಡವಾಳ ಮಾಡಿಕೊಂಡು ಕಾಮಕೇಳಿಗೆ ಇಳಿಯುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.
     ಈ ರೀತಿಯ ಅಧಿಕಾರಿಗಳಿಂದ ಉನ್ನತ ಹುದ್ದೆಯಲ್ಲಿರುವ ಇತರೆ ಅಧಿಕಾರಿಗಳನ್ನು ಜನರು ನಂಬುವುದಾದರೂ ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ತಾಲೂಕು ಕಛೇರಿಯಲ್ಲಿ ಇಲ್ಲಿಯವರೆಗೆ ಭ್ರಷ್ಟಾಚಾರದ ಪ್ರಕರಣಗಳು ಬಯಲಿಗೆ ಬರುತ್ತಿದ್ದವು. ಆದರೆ ಇದೀಗ ಕಾಮಕೇಳಿ ಪ್ರಕರಣವೊಂದು ಬಯಲಿಗೆ ಬಂದಿದೆ.
     ಶಿವಕುಮಾರ್ ೨೦೦೦ ಇಸವಿಯಲ್ಲಿ ಗ್ರೇಡ್-೧ ಅಧಿಕಾರಿಯಾಗಿ ತಹಸೀಲ್ದಾರ್ ಹುದ್ದೆಯಲ್ಲಿ ನೇಮಕಗೊಂಡಿದ್ದು, ಸುಮಾರು ೧೯ ವರ್ಷ ವಿಧಾನಸೌಧದಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಹಾವೇರಿ ತಾಲೂಕು ದಂಡಾಧಿಕಾರಿಯಾಗಿ ಸುಮಾರು ೨ ವರ್ಷ ಸೇವೆ ಸಲ್ಲಿಸಿದ್ದಾರೆ. ಸುಮಾರು ೨೧ ವರ್ಷಗಳ ಸೇವಾ ಅವಧಿಯಲ್ಲಿ ಈ ರೀತಿಯ ಘಟನೆಗಳು ಎಷ್ಟು ನಡೆದಿರಬಹುದೆಂಬ ಅನುಮಾನಗಳು ಇದೀಗ ವ್ಯಕ್ತವಾಗುತ್ತಿವೆ.  
    ಇವರ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಾಗುತ್ತಿದ್ದಂತೆ ಇವರನ್ನು ಹುದ್ದೆಯಿಂದ ಜಿಲ್ಲಾಧಿಕಾರಿಗಳು ಬಿಡುಗಡೆಗೊಳಿಸುವ ಮೂಲಕ ಜಿಲ್ಲೆಯ ಮಾನ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ತಪ್ಪಿತಸ್ಥ ಅಧಿಕಾರಿಯಾಗಿರುವ ಶಿವಕುಮಾರ್ ವಿರುದ್ಧ ತನಿಖೆ ನಡೆಯುವುದು ಯಾವಾಗ ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಅಧಿಕಾರದಲ್ಲಿರುವಾಗ ಪೊಲೀಸರು ಪ್ರಾಮಾಣಿಕವಾಗಿ ತನಿಖೆ ನಡೆಸಲು ಸಾಧ್ಯವೇ ಎಂಬ ಮತ್ತೊಂದು ಪ್ರಶ್ನೆ ಎದುರಾಗಿದೆ.  ಈ ಹಿನ್ನಲೆಯಲ್ಲಿ ತಕ್ಷಣ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂಬ ಆಗ್ರಹ ಕೇಳಿ ಬರುತ್ತಿವೆ.

No comments:

Post a Comment