ಭದ್ರಾವತಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಆರೋಗ್ಯ ಇಲಾಖೆ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾವತಿ, ಸೆ. ೧೬: ಕೊರೋನಾ ಸೋಂಕು ತಪಾಸಣೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗು ವೈದ್ಯರ ವರ್ತನೆಗೆ ತಾಲೂಕು ಪಂಚಾಯಿತಿ ಸದಸ್ಯ ಧರ್ಮೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಡಿ. ಲಕ್ಷ್ಮೀದೇವಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಧರ್ಮೇಗೌಡ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ವೈದ್ಯರು ವಿನಾಕಾರಣ ಸಾರ್ವಜನಿಕರಲ್ಲಿ ಕೊರೋನಾ ಸೋಂಕು ಭೀತಿ ಹುಟ್ಟಿಸುತ್ತಿದ್ದು, ಸೋಂಕಿನ ಲಕ್ಷಣಗಳಿಲ್ಲ್ಲದಿದ್ದರೂ ಸಹ ಕ್ವಾರಂಟೈನ್‌ಗಳಿಗೆ ಕಳುಹಿಸಲಾಗುತ್ತಿದೆ. ಇದರಿಂದಾಗಿ ಕುಟುಂಬಸ್ಥರು ಹಾಗು ಬಂಧು ಮಿತ್ರರು ಆತಂಕಕ್ಕೆ ಒಳಗಾಗುವಂತಾಗಿದೆ ಎಂದು ಆರೋಪಿಸಿದರು.
ಬಹುತೇಕ ಮಂದಿಗೆ ಸೋಂಕಿನ ಯಾವುದೇ ಲಕ್ಷಣಗಳಿಲ್ಲದಿದ್ದರೂ ತಪಾಸಣೆ ನಡೆಸಿ ಶಿವಮೊಗ್ಗದಲ್ಲಿ ಕ್ವಾರಂಟೈನ್ ಮಾಡಿ ನಂತರ ಮನೆಗೆ ಕಳುಹಿಸಲಾಗುತ್ತಿದೆ. ಕ್ವಾರಂಟೈನ್‌ಗಳಲ್ಲಿ ಊಟೋಪಚಾರವಾಗಲಿ, ಆರೋಗ್ಯದ ಬಗ್ಗೆ ವಿಚಾರಿಸುವವರು ಸಹ ಯಾರು ಇರುವುದಿಲ್ಲ. ಕ್ವಾರಂಟೈನ್ ಸಮಸ್ಯೆಗಳನ್ನು ಅಲ್ಲಿಂದ ಬಂದಿರುವವರು ನಮ್ಮ ಬಳಿ ಹೇಳಿಕೊಳ್ಳುತ್ತಿದ್ದಾರೆ. ಪಾಸಿಟೀವ್ ಪ್ರಕರಣಗಳನ್ನು ಹೆಚ್ಚಾಗಿ ತೋರಿಸಬೇಕೆಂಬ ಉದ್ದೇಶದಿಂದ ಈ ರೀತಿ ವೈದ್ಯರು, ಸಿಬ್ಬಂದಿಗಳು ನಡೆದುಕೊಳ್ಳುತ್ತಿದ್ದಾರೆಂದು ದೂರಿದರು.
ಈ ಹಿಂದೆ ಜನರು ವೈದ್ಯರನ್ನು ದೇವರು ಎಂಬ ಭಾವನೆ ಹೊಂದಿದ್ದರು. ಆದರೆ ಇಂದಿನ ವೈದ್ಯರು, ಸಿಬ್ಬಂದಿಗಳನ್ನು ಕಂಡರೆ ಭಯಪಡುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ ಉತ್ತರಿಸಿ, ಸರ್ಕಾರದ ಬದಲಾದ ನಿಯಮಗಳಿಗೆ ತಕ್ಕಂತೆನಡೆದುಕೊಳ್ಳಲಾಗುತ್ತಿದೆ. ಯಾವುದೇ ರೀತಿ ಭಯ ಹುಟ್ಟಿಸುತ್ತಿಲ್ಲ. ಯಾವುದೇ ಭಯವಿಲ್ಲದೆ ಎಲ್ಲರೂ ಸಹ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ. ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಕೆಲವು ಬಾರಿ ವ್ಯತ್ಯಾಸಗಳು ಕಂಡು ಬಂದಿರಬಹುದು. ಆದರೆ ನಿಖರವಾದ ಫಲಿತಾಂಶ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ದೇವರನರಸೀಪುರ ಹಾಗು ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ಗಳನ್ನು ತೆರೆಯಲಾಗಿದೆ. ಯಾವುದೇ ರೋಗ ಲಕ್ಷಣಗಳು ಕಂಡು ಬರದವರನ್ನು ಇಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಹೆಚ್ಚಿನ ರೋಗ ಲಕ್ಷಣಗಳನ್ನು ಹೊಂದಿರುವವರನ್ನು ಮಾತ್ರ ಶಿವಮೊಗ್ಗಕ್ಕೆ ಕಳುಹಿಸಲಾಗುತ್ತಿದೆ. ಹೆಚ್ಚಿನ ಪಾಸಿಟೀವ್ ಪ್ರಕರಣಗಳನ್ನು ತೋರಿಸುವ ಉದ್ದೇಶದಿಂದ ಯಾರನ್ನು ಸಹ ಕ್ವಾರಂಟೈನ್ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಉಳಿದಂತೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ತಹಸೀಲ್ದಾರ್ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳುತ್ತಿಲ್ಲ. ಜನರ ಸಮಸ್ಯೆಗಳನ್ನು ಬಗೆಹರಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯತನದಿಂದ ವರ್ತಿಸುತ್ತಿದ್ದಾರೆಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ನೇತ್ರಾಬಾಯಿ, ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಕಾರ್ಯನಿರ್ವಾಹಣಾಧಿಕಾರಿ ಡಾ. ಜಿ. ಮಂಜುನಾಥ್, ಸದಸ್ಯರಾದ ಧರ್ಮೇಗೌಡ, ಆರ್. ತಿಪ್ಪೇಶ್‌ರಾವ್, ಅಣ್ಣಾಮಲೈ, ಗೀತಾ ಜಗದೀಶ್, ಎಚ್.ಎಂ. ಪ್ರೇಮ್‌ಕುಮಾರ್, ಯಶೋದಮ್ಮ, ಎಂ.ಜಿ ದಿನೇಶ್, ಕೆ.ವಿ ರುದ್ರಪ್ಪ, ಶಮಾಬಾನು, ಸರೋಜಮ್ಮ ಹಾಜ್ಯನಾಯ್ಕ ಮತ್ತು ಆಶಾ ಶ್ರೀಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವಿವಿಧ ಇಲಾಖೆಗಳ ಅಧಿಕಾರಿಗಳಾದ ಕೃಷಿ ಸಹಾಯಕ ನಿರ್ದೇಶಕ ಶಶಿಧರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೂದ್‌ಪೀರ್, ತೋಟಗಾರಿಕೆ ಇಲಾಖೆ ಇಲಾಖೆ ಸಹಾಯಕ ನಿರ್ದೇಶಕ ಕಾಂತರಾಜ್, ಅರಣ್ಯ ಇಲಾಖೆಯ ಸಹಾಯಕ ವಲಯ ಅರಣ್ಯಾಧಿಕಾರಿ ದಿನೇಶ್‌ಕುಮಾರ್, ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್ ಸೇರಿದಂತೆ ಇನ್ನಿತರ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
No comments:
Post a Comment