ಭದ್ರಾವತಿ ತಾಲೂಕಿನಾದ್ಯಂತ ಕಳೆದ ೨ ದಿನಗಳಿಂದ ಧಾರಕಾರವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಸುಣ್ಣದಹಳ್ಳಿ ಬಳಿ ರಸ್ತೆ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಲೋಕೋಪಯೋಗಿ ಇಲಾಖೆಯವರು ನಿರ್ಮಿಸಿದ್ದ ಪರ್ಯಾಯ ರಸ್ತೆ ನೀರಿನಲ್ಲಿ ಕೊಚ್ಚಿಹೋಗಿ ಸಂಚಾರ ಸ್ಥಗಿತಗೊಂಡಿರುವುದು.
ಭದ್ರಾವತಿ, ಮೇ. ೧೯: ಕಳೆದ ೨ ದಿನಗಳಿಂದ ತಾಲೂಕಿನಾದ್ಯಂತ ಧಾರಕಾರವಾಗಿ ಮಳೆಯಾಗುತ್ತಿದ್ದು, ಇದರಿಂದಾಗಿ ಬಹುತೇಕ ಕಡೆ ಮನೆಗಳಿಗೆ ಹಾಗು ಜಮೀನು ಮತ್ತು ತೋಟಗಳಿಗೆ ನೀರು ನುಗ್ಗಿ ಹಾನಿ ಉಂಟಾಗಿರುವ ಘಟನೆಗಳು ನಡೆದಿವೆ.
ಮಳೆ ಹಾನಿ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ತಹಸೀಲ್ದಾರ್ ಆರ್. ಪ್ರದೀಪ್, ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಗುರುವಾರ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಸುಣ್ಣದಹಳ್ಳಿ ಬಳಿ ರಸ್ತೆ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಲೋಕೋಪಯೋಗಿ ಇಲಾಖೆಯವರು ನಿರ್ಮಿಸಿದ್ದ ಪರ್ಯಾಯ ರಸ್ತೆ ನೀರಿನಲ್ಲಿ ಕೊಚ್ಚಿಹೋಗಿದ್ದು, ಇದರಿಂದಾಗಿ ಈ ಮಾರ್ಗದಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ತರೀಕೆರೆ ರಸ್ತೆ ಮೂಲಕ ನಗರ ಪ್ರವೇಶಿಸುವ ವಾಹನಗಳಿಗೆ ಬೈಪಾಸ್ ಮೂಲಕ ಸಂಚರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.
ಕಾರೇಹಳ್ಳಿ, ಮೈದೊಳಲು, ಆನವೇರಿ, ಆದ್ರಿಹಳ್ಳಿ, ಇಟ್ಟಿಗೆಹಳ್ಳಿ ಸೇರಿದಂತೆ ಇತ್ಯಾದಿ ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಎಡೇಹಳ್ಳಿ ಭಾಗದಲ್ಲಿ ಭತ್ತ ಹಾಗು ಕಬ್ಬಿನ ತೋಟಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿವೆ. ಇಟ್ಟಿಗೆಹಳ್ಳಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ರಸ್ತೆಗೆ ಅಡ್ಡಲಾಗಿ ಮಣ್ಣನ್ನು ಸುರಿದಿದ್ದು, ಇದರಿಂದಾಗಿ ರಸ್ತೆ ಯುದ್ದಕ್ಕೂ ನೀರು ನಿಂತುಕೊಂಡು ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೆ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾದ ಹಿನ್ನಲೆಯಲ್ಲಿ ಸ್ಥಳದಲ್ಲಿಯೇ ಬೀಡುಬಿಟ್ಟು ಜೆಸಿಬಿ ಮೂಲಕ ನೀರು ಸರಾಗವಾಗಿ ಹೋಗಲು ಕಾಲುವೆ ನಿರ್ಮಿಸಲಾಗಿದೆ. ಇದರಿಂದಾಗಿ ಸಮಸ್ಯೆ ಸ್ವಲ್ಪಮಟ್ಟಿಗೆ ಸಮಸ್ಯೆ ಬಗೆಹರಿದಿದೆ ಎಂದರು.
ಉಳಿದಂತೆ ಬಿಆರ್‌ಪಿ ಭಾಗದಲ್ಲಿ ಮನೆಗಳ ಮೇಲೆ ಮರಬಿದ್ದು ಹಾನಿ ಉಂಟಾಗಿರುವ ಘಟನೆ ಹೊರತುಪಡಿಸಿ ಚಿಕ್ಕಪುಟ್ಟ ಘಟನೆ ನಡೆದಿವೆ. ನಗರ ವ್ಯಾಪ್ತಿಯಲ್ಲಿ ನಗರಸಭೆ ಪೌರಾಯುಕ್ತರ ನೇತೃತ್ವದಲ್ಲಿ ತಂಡ ರಚಿಸಿ ನಿಗಾವಹಿಸಲು ಸೂಚಿಸಲಾಗಿದೆ. ಒಟ್ಟಾರೆ ತಾಲೂಕಿನಲ್ಲಿ ಹೆಚ್ಚಿನ ಮನೆಗಳಿಗೆ ಹಾನಿಯಾಗಿದ್ದು, ಸ್ವಲ್ಪ ಬೆಳೆ ಹಾನಿ ಉಂಟಾಗಿದೆ. ಹಾನಿ ಕುರಿತ ಸಂಪೂರ್ಣ ಮಾಹಿತಿ ಶುಕ್ರವಾರ ಲಭ್ಯವಾಗಲಿದೆ ಎಂದರು.
No comments:
Post a Comment