ಶಾಲು ಹೊದಿಸಿ, ಹಾರ ಹಾಕಿ ಸಿಹಿ ತಿನಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ
ಭದ್ರಾವತಿ ತಾಲೂಕಿನಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಆಯಾ ವಿದ್ಯಾಸಂಸ್ಥೆಗಳಿಗೆ ಭೇಟಿ ನೀಡಿ ಸನ್ಮಾನಿಸಿ ಅಭಿನಂದಿಸಿದರು.
ಭದ್ರಾವತಿ, ಮೇ. ೧೯: ತಾಲೂಕಿನಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಆಯಾ ವಿದ್ಯಾಸಂಸ್ಥೆಗಳಿಗೆ ಭೇಟಿ ನೀಡಿ ಸನ್ಮಾನಿಸಿ ಅಭಿನಂದಿಸಿದರು.
ನಗರದ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಬಿ. ಪ್ರೇರಣಾ ೬೨೫ಕ್ಕೆ ೬೨೫ ಅಂಕಗಳನ್ನು ಪಡೆದುಕೊಂಡಿರುವ ಹಿನ್ನಲೆಯಲ್ಲಿ ವಿದ್ಯಾಸಂಸ್ಥೆಗೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ವಿದ್ಯಾರ್ಥಿನಿಗೆ ಶಾಲು ಹೊದಿಸಿ, ಹಾರ ಹಾಕುವ ಮೂಲಕ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿನಿಯ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ಪೋಷಕರು, ವಿದ್ಯಾ ಸಂಸ್ಥೆಯ ಶಿಕ್ಷಕರು, ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಬಾರಿ ತುಂಬಾ ಸಂತೋಷದ ವಿಚಾರವೆಂದರೆ ತಾಲೂಕಿನ ಇಬ್ಬರು ವಿದ್ಯಾರ್ಥಿನಿಯರು ೬೨೫ಕ್ಕೆ ೬೨೫ ಅಂಕಗಳನ್ನು ಪಡೆದು ಸಾಧನೆ ಮಾಡುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಅಲ್ಲದೆ ಬಹುತೇಕ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆದುಕೊಂಡಿದ್ದಾರೆ. ಅದರಲ್ಲೂ ಅತಿಹೆಚ್ಚು ಅಂಕ ಪಡೆದ ಹೆಚ್ಚಿನವಿದ್ಯಾರ್ಥಿಗಳು ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿರುವುದು ಹೆಮ್ಮೆಯ ವಿಚಾರವಾಗಿದೆ ಈ ಹಿನ್ನಲೆಯಲ್ಲಿ ಸಾಧನೆಗೆ ಸಹಕರಿಸಿದ ಎಲ್ಲರನ್ನು ಅಭಿನಂದಿಸುತ್ತೇನೆ ಎಂದರು.
ಸಾಧನೆ ಹಿಂದೆ ಕುಟುಂಬ ವರ್ಗದವರ ಪರಿಶ್ರಮ ಹೆಚ್ಚು :
ಉಪನ್ಯಾಸಕಿ ಶಿಲ್ಪ ಹಾಗು ಬಾಲಕೃಷ್ಣ ದಂಪತಿ ಪುತ್ರಿ, ೬೨೫ಕ್ಕೆ ೬೨೫ ಅಂಕ ಪಡೆದುಕೊಂಡಿರುವ ಪ್ರೇರಣಾ .ಬಿ ಮಾತನಾಡಿ, ನನ್ನ ಸಾಧನೆ ಹಿಂದೆ ತಾಯಿ-ತಂದೆ ಹಾಗು ಕುಟುಂಬ ವರ್ಗದವರ ಪರಿಶ್ರಮ ಹೆಚ್ಚಿನದ್ದಾಗಿದೆ. ವಿದ್ಯಾಸಂಸ್ಥೆ ಸಹ ನನ್ನ ಓದಿಗೆ ಬೆನ್ನೆಲುಬಾಗಿದೆ. ಕಲಿಕೆಯಲ್ಲಿ ಯಾವುದೇ ರೀತಿ ಸಮಸ್ಯೆ ಉಂಟಾದರೂ ಸಹ ಶಿಕ್ಷಕರು ತಕ್ಷಣ ಸ್ಪಂದಿಸುವ ಮೂಲಕ ಬಗೆಹರಿಸುತ್ತಿದ್ದರು. ಹೆಚ್ಚಿನ ಅಂಕ ಪಡೆದಿರುವುದು ನನಗೆ ಹೆಚ್ಚಿನ ಸಂತೋಷವನ್ನುಂಟು ಮಾಡಿದೆ. ಅಲ್ಲದೆ ನನ್ನ ಪೋಷಕರು ಹಾಗು ವಿದ್ಯಾಸಂಸ್ಥೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಸಹ ಸಂತೋಷದಿಂದ ಕಾಣುವಂತಾಗಿರುವುದು ನನಗೆ ಹೆಮ್ಮೆ ಪಡುವಂತಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಇದೆ ಶಿಕ್ಷಣ ಸಂಸ್ಥೆಯಲ್ಲಿ ಹೆಚ್ಚಿನ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಸಿಹಿ ತಿನಿಸಿ ಸಂಭ್ರಮ ಹಂಚಿಕೊಂಡರು.
ವಿದ್ಯಾ ಸಂಸ್ಥೆ ಆಡಳಿತಾಧಿಕಾರಿ ಜಗದೀಶ್, ಪ್ರಾಂಶುಪಾಲರಾದ ಡಾ. ಹರಿಣಾಕ್ಷಿ, ಮುಖ್ಯ ಶಿಕ್ಷಕ ಗಿರೀಶ್, ಶಿಕ್ಷಣ ಸಂಯೋಜಕ ರವಿಕುಮಾರ್ ಹಾಗು ವಿದ್ಯಾಸಂಸ್ಥೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು, ಪೋಷಕರು ಉಪಸ್ಥಿತರಿದ್ದರು.
No comments:
Post a Comment