Thursday, May 19, 2022

ಎಸ್‌ಎಸ್‌ಎಲ್‌ಸಿ ಶೇ.೮೩.೫೪ ಫಲಿತಾಂಶ : ೬ ಸರ್ಕಾರಿ, ೧೨ ಖಾಸಗಿ ಶಾಲೆಗಳು ಶೇ.೧೦೦ರಷ್ಟು ಫಲಿತಾಂಶ

ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ, ಮೇ. ೧೯: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ತಾಲೂಕಿಗೆ ಶೇ.೮೩.೫೪ ಫಲಿತಾಂಶ ಲಭಿಸಿದ್ದು, ೬ ಸರ್ಕಾರಿ ಹಾಗು ೧೨ ಖಾಸಗಿ ಶಾಲೆಗಳು ಶೇ.೧೦೦ರಷ್ಟು ಫಲಿತಾಂಶ ಪಡೆದುಕೊಂಡಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ತಿಳಿಸಿದರು.
    ಅವರು ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಒಟ್ಟು ೪,೧೮೬ ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು, ಈ ಪೈಕಿ ೩,೪೯೭ ವಿದ್ಯಾರ್ಥಿ ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಗಳ ೧೮೬೨, ಅನುದಾನಿತ ಶಾಲೆಗಳ ೭೩೭ ಹಾಗು ಖಾಸಗಿ ಶಾಲೆಗಳ ೧೫೮೭ ಸೇರಿ ಒಟ್ಟು ೪,೧೮೬ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ ೧೪೮೪ ಸರ್ಕಾರಿ, ೫೪೭ ಅನುದಾನಿತ ಹಾಗು ೧೪೬೬ ಖಾಸಗಿ ಶಾಲೆಗಳ ಒಟ್ಟು ೩,೪೯೭ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಸರ್ಕಾರಿ ಶಾಲೆಗಳು ಶೇ.೭೯.೭೦ರಷ್ಟು, ಅನುದಾನಿತ ಶಾಲೆಗಳು  ಶೇ. ೭೪.೨೨ರಷ್ಟು  ಹಾಗು ಖಾಸಗಿ ಶಾಲೆಗಳು ಶೇ.೯೨.೩೮ರಷ್ಟು ಫಲಿತಾಂಶ ಪಡೆದುಕೊಂಡಿವೆ ಎಂದರು.
    ಈ ಬಾರಿ ಸಹ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಪರೀಕ್ಷೆಗೆ ಹಾಜರಾದ ೨,೧೭೩ ಬಾಲಕಿಯರಲ್ಲಿ ಶೇ.೮೭.೯೦ರಷ್ಟು ಒಟ್ಟು ೧೯೧೦ ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾದ ೨೦೧೩ ಬಾಲಕರಲ್ಲಿ ಶೇ.೭೮.೮೪ರಷ್ಟು ಒಟ್ಟು ೧೫೮೭ ಬಾಲಕರು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಶೇ.೮೩.೬೫ರಷ್ಟು ಹಾಗು ನಗರ ಭಾಗದಲ್ಲಿ ಶೇ.೮೩.೪೦ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದರು.
    ಈ ಬಾರಿ ಇಬ್ಬರು ವಿದ್ಯಾರ್ಥಿಯರು ೬೨೫ಕ್ಕೆ ೬೨೫ ಅಂಕಗಳನ್ನು ಪಡೆಯುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ. ನಗರದ ಬಿ.ಎಚ್ ರಸ್ತೆ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಪ್ರತೀಕ್ಷಾ ದಯಾನಂದ ೬೨೫ಕ್ಕೆ ೫೨೫ ಅಂಕ ಹಾಗು ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಪ್ರೇರಣಾ .ಬಿ ೬೨೫ಕ್ಕೆ ೬೨೫ ಅಂಕಗಳನ್ನು ಪಡೆದುಕೊಂಡಿದ್ದಾರೆ. ಈ ವಿದ್ಯಾರ್ಥಿಗಳನ್ನು ಇಲಾಖೆಯಿಂದ ಸನ್ಮಾನಿಸಿ ಅಭಿನಂದಿಸಲಾಗಿದೆ. ಈ ಬಾರಿ ೬ ಸರ್ಕಾರಿ ಮತ್ತು ೧೨ ಖಾಸಗಿ ಶಾಲೆಗಳು ಸೇರಿದಂತೆ ಒಟ್ಟು ೧೮ ಶಾಲೆಗಳು ಶೇ.೧೦೦ರಷ್ಟು ಫಲಿತಾಂಶ ಪಡೆದುಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಿವೆ ಎಂದರು.

No comments:

Post a Comment