ಭದ್ರಾವತಿಯಲ್ಲಿ ನಗರಸಭೆ ವತಿಯಿಂದ ೧೦ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆ ಹಿನ್ನಲೆಯಲ್ಲಿ ನಗರದ ಪ್ರಮುಕ ವೃತ್ತಗಳಲ್ಲಿ ಮಹಾದ್ವಾರ ನಿರ್ಮಿಸಿರುವುದು.
ಭದ್ರಾವತಿ, ಸೆ. ೨೫ : ನಗರಸಭೆ ವತಿಯಿಂದ ೧೦ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆಗೆ ಸೆ.೨೬ರಂದು ಬೆಳಿಗ್ಗೆ ೧೧ ಗಂಟೆಗೆ ನಗರಸಭೆ ಆವರಣದಲ್ಲಿ ಚಾಲನೆ ದೊರೆಯಲಿದೆ.
ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯ ಕಾರ್ಮಿಕ ಹೋರಾಟಗಾರ ಡಿ.ಸಿ ಮಾಯಣ್ಣ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸಿ ನಾರಾಯಣಗೌಡ, ಗೃಹ ಸಚಿವ ಅರಗಜ್ಞಾನೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್.ಎಸ್ ಭೋಜೆಗೌಡ, ಎಸ್. ರುದ್ರೇಗೌಡ, ಭಾರತಿ ಶೆಟ್ಟಿ, ಡಿ.ಎಸ್ ಅರುಣ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಎಚ್.ಎಂ ಮನುಕುಮಾರ್ ಹಾಗು ನಗರಸಭೆ ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
ಮೊದಲ ಬಾರಿಗೆ ನಗರಸಭೆ ಆವರಣದಲ್ಲಿ ದಸರಾ ಹಬ್ಬಕ್ಕೆ ಚಾಲನೆ :
ನಗರಸಭೆ ಆವರಣದಲ್ಲಿ ನೂತನವಾಗಿ ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನ ನಿರ್ಮಾಣಗೊಂಡ ನಂತರ ಮೊದಲ ಬಾರಿಗೆ ದಸರಾ ಆಚರಣೆಗೆ ಚಾಲನೆ ನೀಡಲಾಗುತ್ತಿದೆ. ಈ ಹಿಂದೆ ೩೩ ಗ್ರಾಮಗಳ ಅದಿದೇವತೆ ಹಳೇನಗರದ ಶ್ರೀ ಹಳದಮ್ಮ ದೇವಿ ದೇವಸ್ಥಾನದಲ್ಲಿ ನಾಡಹಬ್ಬಕ್ಕೆ ಚಾಲನೆ ನೀಡಲಾಗುತ್ತಿತ್ತು. ನಗರಸಭೆ ವತಿಯಿಂದ ಕೆಲವು ವರ್ಷಗಳ ಹಿಂದೆ ಪಂಚ ಲೋಹದಿಂದ ಕೂಡಿದ ಶ್ರೀ ಚಾಮುಂಡೇಶ್ವರಿ ದೇವಿ ವಿಗ್ರಹ ಖರೀದಿಸಲಾಗಿದ್ದು, ದಸರಾ ಉತ್ಸವ ಮೆರವಣಿಗೆಯಲ್ಲಿ ಈ ವಿಗ್ರಹವನ್ನು ಬಳಸಲಾಗುತ್ತಿದೆ. ಇದಕ್ಕೂ ಮೊದಲು ಚಾಮುಂಡೇಶ್ವರಿ ವಿಗ್ರಹವನ್ನು ಬಾಡಿಗೆಗೆ ಪಡೆಯಲಾಗುತ್ತಿತ್ತು.
ಪ್ರಮುಖ ವೃತ್ತಗಳಲ್ಲಿ ಮಹಾದ್ವಾರ ನಿರ್ಮಾಣ :
೧೦ ದಿನಗಳ ನಾಡಹಬ್ಬ ದಸರಾ ಆಚರಣೆ ಹಿನ್ನಲೆಯಲ್ಲಿ ನಗರದ ಅಂಬೇಡ್ಕರ್ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ.
ರಂಗಪ್ಪ ವೃತ್ತದಲ್ಲಿ ಅಳವಡಿಸಲಾಗಿರುವ ಮಹಾದ್ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಬಿ.ವೈ ರಾಘವೇಂದ್ರ ಹಾಗು ಶಾಸಕ ಬಿ.ಕೆ ಸಂಗಮೇಶ್ವರ್ ಅವರ ಬೃಹತ್ ಭಾವಚಿತ್ರಗಳು ರಾರಾಜಿಸುತ್ತಿವೆ.
No comments:
Post a Comment