ಸೋಮವಾರ, ಆಗಸ್ಟ್ 4, 2025

ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಕಾರ್ಮಿಕರಿಗಾಗಿ ಹಲವು ಯೋಜನೆಗಳು ಜಾರಿಗೆ : ಸಚಿವ ಸಂತೋಷ್ ಎಸ್. ಲಾಡ್

ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆ, ಎಸ್‌ಸಿ/ಎಸ್‌ಟಿ ಕಾರ್ಮಿಕರಿಗಾಗಿ `ಆಶಾದೀಪ' 

ಕಾರ್ಮಿಕ ಇಲಾಖೆ ವತಿಯಿಂದ ಭದ್ರಾವತಿ ನಗರದ ಉಜ್ಜನಿಪುರ, ಬೈಪಾಸ್ ರಸ್ತೆ, ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ಕಾರ್ಮಿಕ ಸಮುದಾಯ ಭವನ ಲೋಕಾರ್ಪಣೆ ಕಾರ್ಯಕ್ರಮ ಸೋಮವಾರ ನಡೆಯಿತು. ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಮತ್ತು ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರು ಕಾರ್ಯಕ್ರಮ ಉದ್ಘಾಟಿಸಿದರು. 
    ಭದ್ರಾವತಿ: ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ದೇಶದಲ್ಲಿಯೇ ಮಹತ್ವಪೂರ್ಣವಾದ ೪ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರಲ್ಲೂ ವಿಶೇಷವಾಗಿ ಗಿಗ್ ಕಾರ್ಮಿಕರಿಗೆ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಗಿಗ್ ಕಾರ್ಮಿಕರ ವಿಮಾ ಯೋಜನೆ ಜಾರಿಗೆ ತರಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಹೇಳಿದರು. 
    ಕಾರ್ಮಿಕ ಇಲಾಖೆ ವತಿಯಿಂದ ನಗರದ ಉಜ್ಜನಿಪುರ, ಬೈಪಾಸ್ ರಸ್ತೆ, ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ಕಾರ್ಮಿಕ ಸಮುದಾಯ ಭವನ ಸೋಮವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. 
      ಸ್ವಿಗ್ಗಿ, ಝೊಮ್ಯಾಟೊ ಸಂಸ್ಥೆಗಳಲ್ಲಿ ಫುಡ್ ಡೆಲಿವರಿ ಮಾಡುವ ಹಾಗು ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಫ್ಲಿಫ್‌ಕಾರ್ಟ್, ಪೋರ್ಟರ್, ಫಾರ್ಮಸಿ, ಬ್ಲಿಂಕಿಟ್, ಝೆಪ್ಟೋ, ಬಿಗ್ ಬಾಸ್ಕೆಟ್, ಡಾಮಿನೋಜ್ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿಸಿಕೊಂಡ ಎಲ್ಲಾ ಅಸಂಘಟಿತ ಗಿಗ್ ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ೫ ಲಕ್ಷಕ್ಕೂ ಹೆಚ್ಚು ಗಿಗ್ ಕಾರ್ಮಿಕರು ರಾಜ್ಯದಲ್ಲಿದ್ದಾರೆ. ಸಾಗಾಣಿಕೆ ದರದ ಮೇಲೆ ಶೇ.೧ ರಿಂದ ೫ರಷ್ಟು ಹಣ ಮತ್ತು ಸರ್ಕಾರ ನೀಡುವ ಹಣದಿಂದ ಅವರಿಗೆ ಅನುಕೂಲ ಮಾಡಲಾಗುತ್ತಿದೆ ಎಂದರು. 
    ಎರಡನೆಯದು ಸಹನಟರು, ಟಿಕೆಟ್ ನೀಡುವವರು, ತಂತ್ರಜ್ಞರು, ಪೌರಾಣಿಕ ನಾಟಕ ನಟರು ಸೇರಿದಂತೆ ಹಿನ್ನೆಲೆಯಲ್ಲಿ ಕೆಲಸ ಮಾಡುವ ಕೆಲಸಗಾರರಿಗಾಗಿ ಸಿನಿ ಯೋಜನೆ ಜಾರಿಗೆ ತರಲಾಗಿದೆ. ಶೇ.೧ ರಿಂದ ೨ ಸೆಸ್ ಮತ್ತು ಸರ್ಕಾರದ ಹಣ ಸೇರಿಸಿ ಅನುಕೂಲ ಮಾಡಲಾಗಿದೆ. ಮೂರನೇಯದು ಕಮರ್ಷಿಯಲ್ ಡ್ರೈವರ್ ಕ್ಲೀನರ್, ಮೆಕ್ಯಾನಿಕ್ ಇತರೆ ಕಾರ್ಮಿಕರ ಸಾರಿಗೆ ಯೋಜನೆ ತರಲಾಗಿದ್ದು, ಅಪಘಾತ, ಮರಣ ಅಥವಾ ತೊಂದರೆಯಾದಲ್ಲಿ ರು. ೫ ಲಕ್ಷ ನೀಡುವ ಯೋಜನೆ ಇದಾಗಿದೆ. ಪ್ರತಿ ತಾಸಿಗೆ ೨೦ ಸಾವಿರ ಮರಣ ಸಂಭವಿಸುತ್ತಿದ್ದು, ಪ್ರತಿ ದಿನ ೪೮೦ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ದುಡಿಯುವ ವರ್ಗವೇ ಇದಕ್ಕೆ ಹೆಚ್ಚು ಬಲಿಯಾಗುತ್ತಿರುವ ಕಾರಣ ದೇಶದ ಜಿಡಿಪಿಗೆ ಶೇ.೩ ನಷ್ಟವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. 
    ನಾಲ್ಕನೇಯದು ದೇಶದಲ್ಲೇ ಪ್ರಪ್ರಥಮ ಯೋಜನೆ `ಆಶಾದೀಪ' ಜಾರಿಗೆ ತರಲಾಗಿದ್ದು, ಎಸ್‌ಸಿ/ಎಸ್‌ಟಿ ಯವರಿಗೆ ಕೆಲಸ ನೀಡುವ ಖಾಸಗಿ ಸಂಸ್ಥೆ/ಕಂಪನಿಗೆ ಕಾರ್ಮಿಕ ಇಲಾಖೆಯಿಂದ ಅವರಿಗೆ ಪಾವತಿಸಲು ಶೇ.೫೦ ಹಣ ನೀಡುವ ಯೋಜನೆ ಇದಾಗಿದೆ. ಈ ಯೋಜನೆ ಕಾರ್ಮಿಕರ ಪಾಲಿಗೆ ನಿಜಕ್ಕೂ ಆಶಾದೀಪವಾಗಿದೆ. ಇದೇ ಮೊದಲ ಬಾರಿಗೆ ಇಲಾಖೆಯು ೯೧ ಸಣ್ಣ ಸಣ್ಣ ಕೆಲಸ ಮಾಡುವ ಸಮುದಾಯಗಳನ್ನು ಗುರುತಿಸಿ ಸ್ಮಾರ್ಟ್ ಕಾರ್ಡ್ ನೀಡುತ್ತಿದೆ. ಅಸಂಘಟಿತ ವರ್ಗದ ಕಾರ್ಮಿಕರ ಸಾಮಾಜಿಕ ಭದ್ರತಾ ಯೋಜನೆಗಳಿಗಾಗಿ ಡೀಸೆಲ್, ಪೆಟ್ರೋಲ್‌ನಿಂದ ೫೦ ಪೈಸೆಯಿಂದ ೧ ರು. ಸೆಸ್ ನೀಡಿದಲ್ಲಿ ಅನುಕೂಲವಾಗುತ್ತದೆ ಎಂದರು.
    ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ರಾಜ್ಯದಲ್ಲಿಯೇ ಏಕೈಕ ಕಾರ್ಮಿಕರ ಸಮುದಾಯ ಭವನ ಇದಾಗಿದೆ. ಸಚಿವ ಸಂತೋಷ್ ಎಸ್ ಲಾಡ್‌ರವರು ದೂರದೃಷ್ಟಿ ಹಾಗು ಚಿಂತನಶೀಲ ವ್ಯಕ್ತಿಯಾಗಿದ್ದು, ಹೆಚ್ಚು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಕಾರ್ಮಿಕರ ಧ್ವನಿಯಾಗಿದ್ದು, ಕಾರ್ಮಿಕರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚಿನ ಕಾರ್ಮಿಕರಿದ್ದು, ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಸಚಿವರಿಗೆ ಮನವಿ ಮಾಡಿದರು. 
    ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್, ಕಾರ್ಮಿಕ ಇಲಾಖೆ ಆಯುಕ್ತ ಡಾ. ಎಚ್.ಎನ್ ಗೋಪಾಲಕೃಷ್ಣ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ. ಭಾರತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಹೇಮಂತ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಕಾರ್ಮಿಕ ನಿರೀಕ್ಷಕರಾದ ಬಿ.ಎಂ ರಕ್ಷಿತ್ ಮತ್ತು ಜೆ.ವಿ ಸುಪ್ರಿತ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು,  ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳು, ವಿವಿಧ ಕಾರ್ಮಿಕ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು. 
    ಹಾಸನ ಪ್ರಾದೇಶಿಕ ಉಪಕಾರ್ಮಿಕ ಆಯುಕ್ತ ಎಚ್.ಎಲ್ ಗುರುಪ್ರಸಾದ್ ಸ್ವಾಗತಿಸಿ, ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಕಲ್ಯಾಣ ಆಯುಕ್ತ ಟಿ. ಆಂಜನೇಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಾಡಗೀತೆ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಜನ್ನಾಪುರ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ತಂಡದಿಂದ ಗಾಯನ ನಡೆಯಿತು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ