Thursday, June 30, 2022

ಸಂಗೀತ, ಸಾಹಿತ್ಯ, ಕಲೆಗೆ ವಿಶಿಷ್ಟವಾದ ಶಕ್ತಿ : ಡಾ. ಅನುರಾಧ ಪಟೇಲ್

ಭದ್ರಾವತಿಯಲ್ಲಿ ಚುಂಚಾದ್ರಿ ಮಹಿಳಾ ವೇದಿಕೆವತಿಯಿಂದ ವಿಶ್ವ ಸಂಗೀತ ದಿನದ ಅಂಗವಾಗಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಹಾಗು ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಹಿರಿಯ ಸುಗಮ ಸಂಗೀತ ಕಲಾವಿದ ಎಸ್.ಬಿ ಶಿವಲಿಂಗಪ್ಪ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಜೂ. ೩೦: ಸಂಗೀತ, ಸಾಹಿತ್ಯ, ಕಲೆ ಇವುಗಳು ಮನುಷ್ಯನ ಅವಿಭಾಜ್ಯ ಅಂಗವಾಗಿದ್ದು, ವಿಶಿಷ್ಟವಾದ ಶಕ್ತಿ ಹೊಂದಿವೆ ಎಂದು ಚುಂಚಾದ್ರಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಡಾ. ಅನುರಾಧ ಪಟೇಲ್ ಹೇಳಿದರು.
      ಅವರು ಗುರುವಾರ ವೇದಿಕೆವತಿಯಿಂದ ವಿಶ್ವ ಸಂಗೀತ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಹಾಗು ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
      ಸಂಗೀತ, ಸಾಹಿತ್ಯ, ಕಲೆ ಇವುಗಳು ಮನಸ್ಸಿಗೆ ನೆಮ್ಮದಿ ನೀಡುವ ಜೊತೆಗೆ ಮನಸ್ಸುಗಳನ್ನು ಒಂದುಗೂಡಿಸುವ ಶಕ್ತಿ ಹೊಂದಿವೆ. ಇವು ಮನಷ್ಯರಲ್ಲಿ ಮಾತ್ರವಲ್ಲ ಪ್ರಾಣಿ, ಪಕ್ಷಿಗಳಲ್ಲೂ ಅಡಗಿವೆ. ಇವುಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಸಂಸ್ಕಾರಯುತವಾದ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದರು.
      ಸಂಗೀತ ಶಿಕ್ಷಕಿ ವಿದ್ವಾನ್ ಪುಷ್ಪ ಕೃಷ್ಣಮೂರ್ತಿ ಮಾತನಾಡಿ, ಕೈಗಾರಿಕೆ ನಗರ ಸಂಗೀತ, ಸಾಹಿತ್ಯ, ಕಲೆಗಳ ತವರೂರಾಗಿದೆ. ಇಲ್ಲಿನ ಕಲಾವಿದರು ರಾಜ್ಯ ಹಾಗು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಿ ಅಭಿನಂದಿಸುವ ಕಾರ್ಯ ಶ್ಲಾಘನೀಯ ಎಂದರು.
      ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ಸಂಗೀತ ಶಿಕ್ಷಕಿ ವಿದೂಷಿ ಗಾಯತ್ರಿ, ನಗರಸಭೆ ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ, ಸೇರಿದಂತೆ ಇನ್ನಿತರರು ಮಾತನಾಡಿದರು. ಹಿರಿಯ ಸುಗಮ ಸಂಗೀತ ಕಲಾವಿದ ಎಸ್.ಬಿ ಶಿವಲಿಂಗಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆ ವಹಿಸಿದ್ದರು.
      ನಗರಸಭಾ ಸದಸ್ಯ ಮಣಿ ಎಎನ್‌ಎಸ್, ಪತಂಜಲಿ ಯೋಗ ಶಿಕ್ಷಕ ಮಂಜುನಾಥ್, ಪುಷ್ಪಾ ಕೇಶವಮೂರ್ತಿ, ವೇದಿಕೆ ಖಜಾಂಚಿ ಭಾರತಿ ಕುಮಾರ್ ಹಾಗು ನಿರ್ದೇಶಕಿಯರು  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ವೇದಿಕೆ ಕಾರ್ಯದರ್ಶಿ ಲತಾ ಪ್ರಭಾಕರ್ ಸ್ವಾಗತಿಸಿದರು. ನೂತನ್ ನಿರೂಪಿಸಿದರು. ಸಹಕಾರ್ಯದರ್ಶಿ ಶೀಲಾ ರವಿ ವಂದಿಸಿದರು.    


No comments:

Post a Comment