ಶುಕ್ರವಾರ, ಅಕ್ಟೋಬರ್ 8, 2021

ವಿಶೇಷ ಚೇತನ ಮಕ್ಕಳ ನ್ಯೂನತೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರ

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯ ಸಾಯಿಬಾಬಾ ಸೇವಾ ಕ್ಷೇತ್ರದಲ್ಲಿ ಶುಕ್ರವಾರ  ತಾಲೂಕಿನ ಇಸಿಓ, ಬಿಐಇಆರ್‌ಟಿ ಮತ್ತು ಸಿಆರ್‌ಪಿ ಹಾಗು ಆಯ್ದ ಶಾಲೆಗಳ ಶಿಕ್ಷಕರು, ವಿಕಲನ ಚೇತನ ಮಕ್ಕಳು ಮತ್ತು ಪೋಷಕರಿಗೆ ವಿಶೇಷ ಚೇತನ ಮಕ್ಕಳ ನ್ಯೂನತೆಗಳ ಬಗ್ಗೆ ಅರಿವು ಮೂಡಿಸುವ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿತ್ತು. ಚಿತ್ರಕಲಾ ಶಿಕ್ಷಕರಾದ ಜನ್ನಾಪುರ ಸಹ್ಯಾದಿ ಶಾಲೆಯ ಸುಧೀಂದ್ರ ಕುಮಾರ್, ಮಾವಿನಕೆರೆ ಸರ್ಕಾರಿ ಪ್ರೌಢಶಾಲೆಯ ವೆಂಕಟೇಶ್,  ಕನಕ ವಿದ್ಯಾಸಂಸ್ಥೆಯ ಗಣೇಶ್ ಮತ್ತು ಪೇಪರ್‌ಟೌನ್ ಪ್ರೌಢಶಾಲೆಯ ಬಾಲರಾಜ್ ಅವರನ್ನು  ಕಾರ್ಯಾಗಾರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಅ. ೮ : ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪದನಿಮಿತ್ತ ಬ್ಲಾಕ್ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ ಹಾಗು ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯ ಶಿಕ್ಷಣ ವಿಭಾಗದ ವತಿಯಿಂದ ನಗರದ ನ್ಯೂಟೌನ್ ಶ್ರೀ ಸತ್ಯ ಸಾಯಿಬಾಬಾ ಸೇವಾ ಕ್ಷೇತ್ರದಲ್ಲಿ ಶುಕ್ರವಾರ ತಾಲೂಕಿನ ಇಸಿಓ, ಬಿಐಇಆರ್‌ಟಿ ಮತ್ತು ಸಿಆರ್‌ಪಿ ಹಾಗು ಆಯ್ದ ಶಾಲೆಗಳ ಶಿಕ್ಷಕರು, ವಿಕಲನ ಚೇತನ ಮಕ್ಕಳು ಮತ್ತು ಪೋಷಕರಿಗೆ ವಿಶೇಷ ಚೇತನ ಮಕ್ಕಳ ನ್ಯೂನತೆಗಳ ಬಗ್ಗೆ ಅರಿವು ಮೂಡಿಸುವ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿತ್ತು.
    ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗ ಜಿಲ್ಲಾ ಸಮಗ್ರ ಶಿಕ್ಷಣ ಕರ್ನಾಟಕ ವಿಭಾಗದ ಡಿವೈಪಿಸಿ ಉಮಾ ಮಹೇಶ್ವರ್, ವಿಶೇಷ ಚೇತನ ಮಕ್ಕಳ ನ್ಯೂನತೆಗಳ ಬಗ್ಗೆ ವಿವರ ನೀಡಿ ಇಲಾಖೆಯ ಜವಾಬ್ದಾರಿಗಳನ್ನು ವಿವರಿಸಿದರು.
    ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಶಿವಮೊಗ್ಗ ಮಾನಸ ನರ್ಸಿಂಗ್ ಹೋಂ ವೈದ್ಯೆ ಡಾ. ವಿದ್ಯಾ ಮಾತನಾಡಿ, ಬುದ್ಧಿಮಾಂದ್ಯತೆ ಎಂದರೇನು?, ಬುದ್ದಿಮಾಂದ್ಯತೆಗೆ ಕಾರಣಗಳು, ಪರಿಹಾರಗಳು ಹಾಗೂ ಅಂತಹ ಮಕ್ಕಳಿಗೆ ನೀಡಬಹುದಾದ ಜೀವನ ಕೌಶಲ್ಯಗಳು, ಸಮುದಾಯ ನೀಡಬಹುದಾದ ಸಹಕಾರಗಳ ಕುರಿತು ಸಾಂದರ್ಭಿಕ ವಿಡಿಯೋಗಳ ಪ್ರದರ್ಶನದ ಮೂಲಕ ಸಮಗ್ರವಾಗಿ ಮಾಹಿತಿ ನೀಡಿದರು.
    ನ್ಯೂಟೌನ್ ತರಂಗ ಶಾಲೆಯ ತಾರಾಮಣಿ  ಶ್ರವಣ ದೋಷ ನ್ಯೂನತೆಗಳು ಕುರಿತು ಮಾತನಾಡಿ, ಶ್ರವಣ ದೋಷದ ಲಕ್ಷಣಗಳು, ಕಾರಣಗಳು, ಪರಿಹಾರಗಳು ಹಾಗೂ ಸಮುದಾಯದ ಸಹಕಾರಗಳ ಕುರಿತು ಮಾಹಿತಿ ನೀಡಿದರು.
    ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕಚೇರಿಯ ಕಟ್ಟಡವನ್ನು ಚಿತ್ರ ಕಲೆಯ ಕೌಶಲ್ಯದ ಮೂಲಕ ಆಕರ್ಷಕವಾಗಿ ಕಂಗೊಳಿಸುವಂತೆ ಮಾಡಿರುವ ಚಿತ್ರಕಲಾ ಶಿಕ್ಷಕರಾದ ಜನ್ನಾಪುರ ಸಹ್ಯಾದಿ ಶಾಲೆಯ ಸುಧೀಂದ್ರ ಕುಮಾರ್, ಮಾವಿನಕೆರೆ ಸರ್ಕಾರಿ ಪ್ರೌಢಶಾಲೆಯ ವೆಂಕಟೇಶ್,  ಕನಕ ವಿದ್ಯಾಸಂಸ್ಥೆಯ ಗಣೇಶ್ ಮತ್ತು ಪೇಪರ್‌ಟೌನ್ ಪ್ರೌಢಶಾಲೆಯ ಬಾಲರಾಜ್ ಅವರನ್ನು  ಕಾರ್ಯಾಗಾರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
    ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪನಿರ್ದೇಶಕರ ಕಛೇರಿಯ ಡಿವೈಪಿಸಿ ಗಣಪತಿ, ರಾಮಪ್ಪಗೌಡ, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಪ್ರಭಾಕರ ಬೀರಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸಿಆರ್‌ಪಿ ಸುನಿತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸಮನ್ವಯಾಧಿಕಾರಿ ವೈ. ಗಣೇಶ್ ಸ್ವಾಗತಿಸಿದರು. ಕವಿತಾ ನಿರೂಪಿಸಿದರು.  ಮನ್ಸೂರ್ ಅಹ್ಮದ್ ವಂದಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ