ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಭದ್ರಾವತಿ ಘಟಕದಲ್ಲಿ ರೋಟರಿ ಕ್ಲಬ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಕುಟುಂಬ ವೈದ್ಯ ಡಾ. ಕೃಷ್ಣ ಎಸ್ ಭಟ್ ಪಾಲ್ಗೊಂಡು ಮಾತನಾಡಿದರು.
ಭದ್ರಾವತಿ, ಅ. ೯: ದುಶ್ಚಟಗಳಿಗೆ ಬಲಿಯಾಗದೆ, ಕೀಳರಿಮೆಯಿಂದ ದೂರವಿರುವ ಮೂಲಕ ನಮ್ಮ ಸುತ್ತಮುತ್ತಲಿನ ಪರಿಸರಕ್ಕೆ ಹೊಂದಿಕೊಂಡು ನಮ್ಮ ಇತಿಮಿತಿಯಲ್ಲಿ ಬದುಕು ರೂಪಿಸಿಕೊಂಡಾಗ ನಾವೆಲ್ಲರೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ನಗರದ ಕುಟುಂಬ ವೈದ್ಯ ಡಾ. ಕೃಷ್ಣ ಎಸ್ ಭಟ್ ತಿಳಿಸಿದರು.
ಅವರು ನಗರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಘಟಕದಲ್ಲಿ ರೋಟರಿ ಕ್ಲಬ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಾನಸಿಕ ಆರೋಗ್ಯ ಸಹ ದೈಹಿಕ ಆರೋಗ್ಯದಷ್ಟೆ ಮುಖ್ಯವಾಗಿದೆ. ಪ್ರತಿಯೊಬ್ಬರ ನಡುವೆ ಪರಸ್ಪರ ಹೊಂದಾಣಿಕೆ ಮನೋಭಾವನೆ ಅಗತ್ಯವಾಗಿದೆ. ಯಾವುದೇ ರೀತಿಯಲ್ಲಿ ಇತರರಿಗೆ ಹೋಲಿಕೆ ಮಾಡಿಕೊಳ್ಳುವ ಮನಸ್ಥಿತಿಗೆ ಹೊಂದಿಕೊಳ್ಳದೆ. ಇರುವುದರಲ್ಲಿಯೇ ಸಂತೃಪ್ತಿ ಪಡುವ ಮನೋಭಾವ ರೂಪಿಸಿಕೊಳ್ಳಬೇಕೆಂದರು. ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು. ಭವಿಷ್ಯದಲ್ಲಿ ಒಳ್ಳೆಯ ಅವಕಾಶಗಳನ್ನು ಎದುರು ನೋಡುವ ವಿಶ್ವಾಸಹೊಂದಿರಬೇಕು. ಯಾವುದೇ ಕಾರಣಕ್ಕೂ ಹತಾಶೆ, ನಿರಾಸೆಗಳಿಗೆ ಒಳಗಾಗಬಾರದು ಎಂದರು.
ಮನೋವೈದ್ಯ ಡಾ. ಹರೀಶ ದೇಲಂತ ಬೆಟ್ಟು ಮಾತನಾಡಿ, ಪ್ರತಿಯೊಬ್ಬರ ಕೆಲಸದಲ್ಲಿ ನಿಷ್ಠೆ ಬಹು ಮುಖ್ಯವಾಗಿದೆ. ಅದರಲ್ಲಿಯೇ ತೃಪ್ತಿ ಹೊಂದಿ, ಎಷ್ಟೇ ಒತ್ತಡವಿದ್ದರೂ ಮದ್ಯ ಸೇವನೆ ವ್ಯಸನಕ್ಕೆ ಬಲಿಯಾಗಬಾರದು. ಪ್ರತಿದಿನ ನಡಿಗೆ, ಯೋಗ, ಪ್ರಾಣಯಾಮ, ವ್ಯಾಯಾಮಕ್ಕೆ ಸ್ವಲ್ಪ ಸಮಯ ಮೀಸಲಿಡಬೇಕೆಂದರು.
ಘಟಕದ ವ್ಯವಸ್ಥಾಪಕಿ ಅಂಬಿಕಾ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಅಧ್ಯಕ್ಷ ಆದರ್ಶ, ಕಾರ್ಯದರ್ಶಿ ರಾಘವೇಂದ್ರ ಉಪಾಧ್ಯಾಯ, ಬಿ.ಎಂ ಶಾಂತಕುಮಾರ್, ಸುಂದರ್‌ಬಾಬು, ಅಡವೀಶಯ್ಯ, ಬಸ್ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment