ಶಾಂತಿಸಭೆಯಲ್ಲಿ ಮುಸ್ಲಿಂ ಮುಖಂಡರ ಮನವಿ
ಭದ್ರಾವತಿ ರೋಟರಿ ಕ್ಲಬ್ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು.
ಭದ್ರಾವತಿ, ಜೂ. ೨೧ : ತಾಲೂಕಿನಾದ್ಯಂತ ಈ ಬಾರಿ ಬಕ್ರೀದ್ ಹಬ್ಬ ಶಾಂತಿ, ಸಂಭ್ರಮದಿಂದ ಆಚರಿಸಲು ಹೆಚ್ಚಿನ ಸಹಕಾರ ನೀಡಬೇಕೆಂದು ಬುಧವಾರ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆದ ಶಾಂತಿಸಭೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಮನವಿ ಮಾಡಿದರು.
ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಹುತೇಕ ಮುಸ್ಲಿಂ ಸಮುದಾಯದ ಮುಖಂಡರು, ಜೂ.೨೮ರಿಂದ ೩ ದಿನಗಳ ಕಾಲ ಹಬ್ಬದ ಆಚರಣೆ ನಡೆಯಲಿದೆ. ಮೊದಲ ದಿನ ನಗರಸಭೆ ವ್ಯಾಪ್ತಿಯ ತರೀಕೆರೆ ರಸ್ತೆಯ ಈದ್ಗಾ ಮೈದಾನ ಸೇರಿದಂತೆ ೪ ಖಬರ್‌ಸ್ತಾನ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದಾರೆ. ನಂತರ ತಮ್ಮ ತಮ್ಮ ಮನೆಗಳಿಗೆ ತೆರಳಿ ೩ ದಿನಗಳ ಕಾಲ ಹಬ್ಬದ ಸಂಭ್ರಮದಲ್ಲಿ ತೊಡಗಲಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ಧರ್ಮದವರು ಸಹ ಹೆಚ್ಚಿನ ಸಹಕಾರ ನೀಡುವಂತೆ ಮನವಿ ಮಾಡಿದರು.
ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಪೊಲೀಸ್ ಇಲಾಖೆ ಹೆಚ್ಚಿನ ಸಹಕಾರ ನೀಡಬೇಕು. ಎಲ್ಲಾ ಧರ್ಮದವರೊಂದಿಗೆ ಸೌಹಾರ್ದಯುತವಾಗಿ ಹಬ್ಬ ಆಚರಿಸುವಂತಹ ವಾತಾವರಣಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದರು.
ಸಭೆಯಲ್ಲಿ ಪ್ರಮುಖರಾದ ಅಂಜುಮಾನ್ ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಮುರ್ತುಜಾ ಖಾನ್, ಮಾಜಿ ಉಪಮೇಯರ್ ಮಹಮದ್ ಸನ್ನಾವುಲ್ಲಾ, ಅಮೀರ್‌ಜಾನ್, ಫೀರ್‌ಷರೀಫ್, ಮಸ್ತಾನ್, ದಿಲ್‌ದಾರ್, ಖಾದರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಸದಸ್ಯರಾದ ಟಿಪ್ಪುಸುಲ್ತಾನ್, ಸೈಯದ್ ರಿಯಾಜ್, ವಿ. ಕದಿರೇಶ್, ಪ್ರಜಾಪ್ರತಿನಿಧಿ ಸುರೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮಾರೆಡ್ಡಿ, ಹಿರಿಯ ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ್ ದಯಾಮ ಸೇರಿದಂತೆ ವೃತ್ತ ನಿರೀಕ್ಷಕರು, ವಿವಿಧ ಠಾಣೆಗಳ ಠಾಣಾಧಿಕಾರಿಗಳು ಉಪಸ್ಥಿತರಿದ್ದರು.
No comments:
Post a Comment