ಮೊದಲು ಕೆರೆ ಸರ್ವೇ ನಡೆಸಿ ಒತ್ತುವರಿ ತೆರವುಗೊಳಿಸಿ, ಮಲ-ಮೂತ್ರಗಳಿಂದ ತುಂಬಿರುವ ಹೂಳು ತೆಗೆಯಿರಿ
ಭದ್ರಾವತಿ ನಗರಸಭೆಗೆ ಒಳಪಡುವ ಜನ್ನಾಪುರ-ಸಿದ್ದಾಪುರ ವ್ಯಾಪ್ತಿಯಲ್ಲಿರುವ ಸರ್ವೆ ನಂ.೭೦ರ ಕೆರೆಯನ್ನು ಅಭಿವೃದ್ಧಿಗೊಳಿಸಿವ ನಿಟ್ಟಿನಲ್ಲಿ ಅವೈಜ್ಞಾನಿಕ ಕಾಮಗಾರಿ ಕೈಗೊಳ್ಳಲು ಮುಂದಾಗುತ್ತಿರುವುದನ್ನು ವಿರೋಧಿಸಿ ಜನ್ನಾಪುರ-ಸಿದ್ದಾಪುರ ಕೆರೆ ಸಂರಕ್ಷಣಾ ಸಮಿತಿ ವತಿಯಿಂದ ಬುಧವಾರ ಸಭೆ ನಡೆಸಲಾಯಿತು.
ಭದ್ರಾವತಿ, ಮಾ. ೩೦: ನಗರಸಭೆಗೆ ಒಳಪಡುವ ಜನ್ನಾಪುರ-ಸಿದ್ದಾಪುರ ವ್ಯಾಪ್ತಿಯಲ್ಲಿರುವ ಸರ್ವೆ ನಂ.೭೦ರ ಕೆರೆಯನ್ನು ಅಭಿವೃದ್ಧಿಪಡಿಸುವ ಮೊದಲು ಒತ್ತುವರಿ ತೆರವು ಮಾಡಿ, ನೂರಾರು ವರ್ಷಗಳಿಂದ ಮಲ-ಮೂತ್ರಗಳಿಂದ ತುಂಬಿಕೊಂಡಿರುವ ಹೂಳನ್ನು ತೆಗೆದು ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ಏ.೪ರಂದು ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಜನ್ನಾಪುರ-ಸಿದ್ದಾಪುರ ಕೆರೆ ಸಂರಕ್ಷಣಾ ಸಮಿತಿ ಪ್ರಧಾನ ಸಂಚಾಲಕ ಬಾಲಕೃಷ್ಣ ತಿಳಿಸಿದರು.
ನಮ್ಮ ಪೂರ್ವಿಕರು ಜನಸಾಮಾನ್ಯರಿಗೆ, ಜಾನುವಾರುಗಳಿಗೆ ಮತ್ತು ರೈತರು ಬೆಳೆ ಬೆಳೆಯಲು ಅನುಕೂಲವಾಗುವಂತೆ ಕೆರೆಕಟ್ಟೆಗಳನ್ನು ನಿರ್ಮಾಣ ಮಾಡಿದ್ದು, ಜನ್ನಾಪುರ-ಸಿದ್ದಾಪುರ ಕೆರೆ ಒಟ್ಟು ೫೨ ಎಕರೆ ವಿಸ್ತೀರ್ಣ ಹೊಂದಿದೆ. ಆದರೆ ತಾಲೂಕು ಆಡಳಿತ ಸರ್ವೆ ಕಾರ್ಯ ನಡೆಸಿ ಕೆರೆ ಜಾಗವನ್ನು ೪೫ ಎಕರೆ ೨೦ ಗುಂಟೆ ಎಂದು ಗುರುತಿಸಿದೆ. ಉಳಿದ ಜಾಗ ಒತ್ತುವರಿಯಾಗಿದ್ದು, ಭೂ ಕಬಳಿಕೆದಾರರನ್ನು ರಕ್ಷಿಸುವ ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಪ್ರಸ್ತುತ ಸರ್ವೆ ಕಾರ್ಯ ನಡೆಸಿ ಗುರುತಿಸಲಾಗಿರುವ ೪೫ ಎಕರೆ ೨೦ ಗುಂಟೆ ಜಾಗದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಬದಲು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಕೇವಲ ೩೦ ಎಕರೆ ಜಾಗವನ್ನು ಮಾತ್ರ ಸೀಮಿತಗೊಳಿಸಿದೆ. ಈಗಾಗಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲು ಮೊದಲನೇ ಕಂತಿನ ಹಣ ಅಂದಾಜು ೪,೪೮,೦೦,೦೦೦ ರು. ಬಿಡುಗಡೆಗೊಳಿಸಿದೆ. ಇದು ಅವೈಜ್ಞಾನಿಕ ಕಾಮಗಾರಿಯಾಗಿದ್ದು, ಮೊದಲು ೫೨ ಎಕರೆ ಜಾಗವನ್ನು ಗುರುತಿಸಿ ಸರ್ವೆ ಕಾರ್ಯ ನಡೆಸಿ ಒತ್ತುವರಿ ತೆರವುಗೊಳಿಸಬೇಕೆಂದು ಆಗ್ರಹಿಸಿದರು.
ನೂರಾರು ವರ್ಷಗಳಿಂದ ಈ ಕೆರೆ ಮಲ-ಮೂತ್ರಗಳಿಂದ ತುಂಬಿಕೊಂಡಿದ್ದು, ಕಲುಷಿತಗೊಂಡಿರುವ ಕೆರೆಯಲ್ಲಿ ಹೂಳು ತೆಗೆದು ಸ್ವಚ್ಛಗೊಳಿಸುವ ಕಾರ್ಯ ಮೊದಲು ಕೈಗೊಳ್ಳಬೇಕಾಗಿದೆ. ಆ ನಂತರ ಕಾಮಗಾರಿ ಆರಂಭಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
ಕೆರೆ ಅಭಿವೃದ್ಧಿ ಹೆಸರಿನಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲು ಮುಂದಾಗಿರುವ ತಾಲೂಕು ಆಡಳಿತ ಹಾಗು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನಡೆಯನ್ನು ಖಂಡಿಸಿ ಹೋರಾಟ ನಡೆಸಲಾಗುತ್ತಿದ್ದು, ಕೆರೆಯನ್ನು ಪೂರ್ಣಪ್ರಮಾಣದಲ್ಲಿ ಸಂರಕ್ಷಿಸುವುದು ಮೊದಲ ಆದ್ಯತೆಯಾಗಿದೆ. ಈ ಹಿನ್ನಲೆಯಲ್ಲಿ ಏ.೪ರಂದು ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗರಹ ನಡೆಸಲಾಗುತ್ತಿದೆ ಎಂದರು.
ನಗರಸಭಾ ಸದಸ್ಯರಾದ ಆರ್. ಮೋಹನ್‌ಕುಮಾರ್, ರಿಯಾಜ್ ಅಹಮದ್, ಪ್ರಮುಖರಾದ ಚನ್ನಪ್ಪ, ಕೃಷ್ಣೇಗೌಡ, ವಿಶ್ವೇಶ್ವರ ಗಾಯಕ್ವಾಡ್, ಎನ್. ರಾಮಕೃಷ್ಣ, ಕೆ. ಮಂಜುನಾಥ್, ರಾಮಚಂದ್ರ, ಶ್ರೀನಿವಾಸ್, ಜಿ. ರಾಜು, ಗಿರಿನಾಯ್ಡು, ವಿಲ್ಸನ್ ಬಾಬು, ವಿನೋದ್, ವೆಂಕಟರಮಣಶೆಟ್ಟಿ, ಹನುಮಂತಪ್ಪ, ಮುದ್ದಪ್ಪ, ರಾಜೇಂದ್ರ, ಹಾವು ಮಂಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment