ಮಂಗಳವಾರ, ಸೆಪ್ಟೆಂಬರ್ 2, 2025

ನಿವಾಸಿಗಳಿಗೆ ಮೂಲ ಸೌಕರ್ಯ ಕಲ್ಪಿಸಿ, ಆಸ್ಪತ್ರೆ-ಪೊಲೀಸ್ ಠಾಣೆ ನಿರ್ಮಿಸಿ

ಡಿಎಸ್‌ಎಸ್ ನೇತೃತ್ವದಲ್ಲಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ : ಮನವಿ 

ನಿವಾಸಿಗಳಿಗೆ ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಿ ಕೊಡುವುದು, ಸರ್ಕಾರಿ ಆಸ್ಪತ್ರೆ ಮತ್ತು ಪೊಲೀಸ್ ಠಾಣೆ ನಿರ್ಮಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಲಿತ ಸಂಘ ಸಮಿತಿ(ಸಂಯೋಜಕ) ನೇತೃತ್ವದಲ್ಲಿ ಭದ್ರಾವತಿ  ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸುವ ಮೂಲಕ ತಹಸೀಲ್ದಾರ್ ಪರುಸಪ್ಪ ಕುರುಬರ ಅವರಿಗೆ ಮನವಿ ಸಲ್ಲಿಸಲಾಯಿತು.  
    ಭದ್ರಾವತಿ : ನಿವಾಸಿಗಳಿಗೆ ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಿ ಕೊಡುವುದು, ಸರ್ಕಾರಿ ಆಸ್ಪತ್ರೆ ಮತ್ತು ಪೊಲೀಸ್ ಠಾಣೆ ನಿರ್ಮಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಲಿತ ಸಂಘ ಸಮಿತಿ(ಸಂಯೋಜಕ) ನೇತೃತ್ವದಲ್ಲಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸುವ ಮೂಲಕ ತಹಸೀಲ್ದಾರ್ ಪರುಸಪ್ಪ ಕುರುಬರ ಅವರಿಗೆ ಮನವಿ ಸಲ್ಲಿಸಲಾಯಿತು. 
    ತಾಲೂಕಿನ ಕಸಬಾ-೨ನೇ ಹೋಬಳಿ, ಹುಣಸೆಕಟ್ಟೆ ಬಿ.ಬಿ ಮೈನ್ಸ್ ಸರ್ವೆ ನಂ.೮ ಮತ್ತು ೧೪ರಲ್ಲಿನ ಸರ್ಕಾರಿ ಜಮೀನಿನಲ್ಲಿ ಸುಮಾರು ೧೦೦ ಮನೆಗಳಿದ್ದು, ಈ ಪೈಕಿ ಕೆಲವರಿಗೆ ಮಾತ್ರ ಹಕ್ಕು ಪತ್ರ ನೀಡಿದ್ದು, ಇನ್ನೂ ಕೆಲವರಿಗೆ ಹಕ್ಕು ಪತ್ರ ವಿತರಣೆ ಬಾಕಿ ಇರುತ್ತದೆ. ಹಕ್ಕು ಪತ್ರ ನೀಡಿರುವ ಮನೆಗಳಿಗೆ ಕುಡಿಯುವ ನೀರು, ವಿದ್ಯುತ್ ಮತ್ತು ರಸ್ತೆ ನಿರ್ಮಾಣ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳನ್ನು ತಕ್ಷಣ ಕಲ್ಪಿಸಿಕೊಡುವಂತೆ ಆಗ್ರಹಿಸಲಾಯಿತು. 
    ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಮತ್ತು ಪೊಲೀಸ್ ಠಾಣೆ ಅಗತ್ಯತೆ ಹೆಚ್ಚಾಗಿದ್ದು, ಈಗಾಗಲೇ ಮೀಸಲಿರಿಸಿರುವ ಜಾಗದಲ್ಲಿ ತಕ್ಷಣ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು. 
    ತಾಲೂಕು ಕಸಬಾ ಹೋಬಳಿ ಕಾಳಿಂಗನಹಳ್ಳಿ ಸರ್ವೆ ನಂ.೧ರಲ್ಲಿ ಒಟ್ಟು ೯೭ ಎಕರೆ ಜಮೀನಿದ್ದು, ಈ ಪೈಕಿ ೬೦ ಎಕರೆ ಜಮೀನಿಗೆ ಸಾಗುವಳಿ ಚೀಟಿ ಸರ್ಕಾರದಿಂದ ನೀಡಲಾಗಿದೆ. ಆದರೆ ಇದುವರೆಗೂ ಖಾತೆ ಪಹಣಿ ಮತ್ತು ಮ್ಯುಟೇಷನ್ ದಾಖಲೆ ಮಾಡಿರುವುದಿಲ್ಲ. ತಕ್ಷಣ ಸಾಗುವಳಿ ಚೀಟಿದಾರರಿಗೆ ಖಾತೆ ಪಹಣಿ ಮತ್ತು ಮ್ಯುಟೇಷನ್ ದಾಖಲೆ ನೀಡಬೇಕು. ಉಳಿದಿರುವ ೩೭ ಎಕರೆ ಜಮೀನು ಇತ್ತೀಚೆಗೆ ಅರಣ್ಯವೆಂದು ನಮೂದಿಸಿ ಸಾಗುವಳಿದಾರರಿಗೆ ವಂಚಿಸಲಾಗಿದೆ. ಈ ಸಂಬಂಧ ತನಿಖೆ ನಡೆಸಿ ಸಾಗುವಳಿದಾರರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಒತ್ತಾಯಿಸಲಾಯಿತು. 
    ತಾಲೂಕಿನಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗು ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರು ಸುಮಾರು ೬೦-೭೦ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಇವರ ಪಹಣಿಗಳನ್ನು ವಜಾ ಮಾಡಿ ವಂಚಿಸಲಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಜಮೀನು ಸಂಬಂಧ ಪುನರ್ ಪರಿಶೀಲಿಸಿ ಖಾತೆ ಪಹಣಿ ಮತ್ತು ಮ್ಯುಟೇಷನ್ ಮಾಡಿಕೊಡುವ ಮೂಲಕ ಅವರ ಸಂಕಷ್ಟಕ್ಕೆ ಸ್ಪಂದಿಸುವಂತೆ ಕೋರಲಾಯಿತು.  
    ಒಟ್ಟಾರೆ ಜಮೀನು ಸಂಬಂಧ ತಾಲೂಕಿನಲ್ಲಿ ಇನ್ನೂ ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ತಕ್ಷಣ ಈಡೇರಿಸುವಂತೆ ಆಗ್ರಹಿಸಲಾಯಿತು. 
    ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಯೋಜಕರಾದ ಆರ್.ಜಗದೀಶ್, ವಿರೂಪಾಕ್ಷಪ್ಪ, ರಾಜ್ಯ ಸಮಿತಿ ಸದಸ್ಯ ಚೌಡಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಸಂತೋಷ್, ಗಂಗಾಧರ್, ಅಣ್ಣಾದೊರೈ, ಶಿವಕುಮಾರ್, ಗಣೇಶ್ ಸೇರಿದಂತೆ ಇನ್ನಿತರ ಮುಖಂಡರು, ನಿವಾಸಿಗಳು ಪಾಲ್ಗೊಂಡಿದ್ದರು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ