Wednesday, October 27, 2021

ಸಂಕಷ್ಟಕ್ಕೆ ಒಳಗಾಗಿರುವ ಕಾರ್ಮಿಕರ ನೋವಿಗೆ ಮಿಡಿದ ಹೃದಯ

ಹುಟ್ಟುಹಬ್ಬ ಆಚರಣೆಯಿಂದ ಹಿಂದೆ ಸರಿದ ಶಾಸಕ ಸಂಗಮೇಶ್ವರ್

ಬಿ.ಕೆ ಸಂಗಮೇಶ್ವರ್
    ಭದ್ರಾವತಿ, ಅ. ೨೭: ಕ್ಷೇತ್ರದ ಪ್ರತಿಷ್ಠಿತ ಕೈಗಾರಿಕೆಗಳಾದ ಕೇಂದ್ರ ಉಕ್ಕು ಪ್ರಾಧಿಕಾರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾರ್ಖಾನೆಗಳು ಪ್ರಸ್ತುತ ಅವನತಿ ದಾರಿಯಲ್ಲಿ ಸಾಗುತ್ತಿದ್ದು, ಎರಡು ಕಾರ್ಖಾನೆಗಳ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ. ಇಂತಹ ಸಂದರ್ಭದಲ್ಲಿ ಜನ್ಮದಿನ ಆಚರಿಸಿಕೊಳ್ಳುವ ಮನಸ್ಥಿತಿ ನನ್ನದಲ್ಲ. ಈ ಹಿನ್ನಲೆಯಲ್ಲಿ ಈ ಬಾರಿ ಅ.೨೮ರ ಗುರುವಾರ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದ್ದಾರೆ.
    ಕೇಂದ್ರ ಹಾಗು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಎರಡು ಕಾರ್ಖಾನೆಗಳು ಅವನತಿ ದಾರಿಯಲ್ಲಿ ಸಾಗುವಂತಾಗಿದೆ. ಎರಡು ಕಾರ್ಖಾನೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾನು ಶಕ್ತಿ ಮೀರಿ ಪ್ರಯತ್ನಿಸಿದ್ದು, ಅಲ್ಲದೆ ಕ್ಷೇತ್ರದಲ್ಲಿ ನಿರಂತರವಾಗಿ ಹೋರಾಟಗಳು ನಡೆದರೂ ಸಹ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಇಚ್ಛಾ ಶಕ್ತಿ ತೋರಿಸದಿರುವುದು ಮನಸ್ಸಿಗೆ ನೋವುಂಟು ಮಾಡಿದೆ.
    ಎರಡು ಕಾರ್ಖಾನೆಗಳನ್ನು ನಂಬಿ ಬದುಕು ಸಾಗುತ್ತಿದ್ದ, ಸಾವಿರಾರು ಕಾರ್ಮಿಕರು, ಕುಟುಂಬ ವರ್ಗದವರು, ಕೃಷಿಕರು, ವ್ಯಾಪಾರಸ್ಥರು ಪ್ರಸ್ತುತ ಬೀದಿ ಪಾಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಬದುಕು ಸಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಈ ಹಿನ್ನಲೆಯಲ್ಲಿ ಕ್ಷೇತ್ರದ ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳು ಸೇರಿದಂತೆ ಸಮಸ್ತ ನಾಗರಿಕರು ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಬಡಜನರ ಕಷ್ಟಗಳಿಗೆ ಸ್ಪಂದಿಸಿ ಅವರಿಗೆ ಕೈಲಾದಷ್ಟು ನೆರವು ನೀಡುವ ಮೂಲಕ ನನಗೆ ಶುಭ ಹಾರೈಸುವಂತೆ ಕೋರಿದ್ದಾರೆ.

1 comment:

  1. ಮಾನ್ಯ ಶಾಸಕರಾದ ಶ್ರೀ ಬಿ ಕೆ.ಸಂಗಮೇಶ್ ಅವರ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೆ ಬಡ ಕಾರ್ಮಿಕರ ಹಿತ ಚಿಂತನೆಯ ಹಾಗೂ ಸಮಾಜದಲ್ಲಿ ಹಿಂದುಳಿದ ಅಸಂಖ್ಯಾತ ಜನತೆಯ ಪರವಾಗಿ ತಮ್ಮ ಹುಟ್ಟುಹಬ್ಬದ ದಿನದಲ್ಲಿ ಅವರ ಬಡವರ ಕಾಳಜಿ ಬಗ್ಗೆ ಅತ್ಯಂತ ಮಾನವೀಯತೆ ಮೆರೆಯುವಂತಹ ಕಾಯಕವನ್ನು ಮಾನ್ಯ ಶಾಸಕರು ಅತ್ಯಂತ ದೃಢನಿರ್ಧಾರವನ್ನು ಕೈಗೊಂಡಿರುವುದು ಶ್ಲಾಘನೀಯವಾದ ಕಾರ್ಯ ಮಾನ್ಯ ಶಾಸಕರು ಸಮಾಜದ ಬಡವರ ದೀನ ದಲಿತರ ಏಳಿಗೆಗಾಗಿ ಶ್ರಮಿಸುತ್ತಿರುವುದು ಅವರ ಮಾದರಿ ರಾಜಕೀಯ ನಡೆಯಾಗಿದೆ ಅವರಿಗೆ ಭಗವಂತ ನೂರಾರು ವರ್ಷಗಳ ಕಾಲ ಆರೋಗ್ಯದಿಂದ ಜನಸೇವೆಯನ್ನು ಮಾಡುವಂತಹ ಅವಕಾಶಗಳನ್ನು ಒದಗಿಸಬೇಕು ಎಂದು ಜನತೆಯ ಪರವಾಗಿ ಹಾಗೂ ವೈಯಕ್ತಿಕವಾಗಿ ಆಶಿಸುವೆ ಶುಭವಾಗಲಿ...🙏🙏🌹🌹🌹

    ReplyDelete